ನಾಟಕಕಲೆ ವಿಲಾಸಕ್ಕಲ್ಲ ವಿಕಾಸಕ್ಕೆ

(ಮಾ. 27 ರಂಗಭೂಮಿ ದಿನಾಚರನೆ: ರಂಗ ಕಲೆಗೆ ದುಡಿದ, ಮಿಡಿದ, ಮಡಿದ ಮನಗಳಿಗೆ ವಂದನೆ: ಅಭಿನಂದನೆ)

 ಆಂಗಿಕ ಭುವನಂ ಯಸ್ಯ ವಾಚಿಕಂ ಸರ್ವಾಂಜ್ಞಮಯA ಆಚಾರ್ಯಂ ಚಂದ್ರಿತಾರಾದಿತA ನಮಃ ಸಾತ್ವಿಕಂ ನಟೇಶಂ ಎಂದು ಆ ನಟವರನಾದ ಶಿವನ ಸ್ತುತಿಯನ್ನು ಕೃತಿ ಆರಂಭದಲ್ಲಿಯೇ ಮಾಡಿದಂತೆ ನಟನ ಆಂಗಿಕ ಅಭಿನಯ ಸಂಭಾಷಣೆ, ವೇಷಭೂಷಣದೊಂದಿಗೆ ಮಾನವನ ನಿತ್ಯ ಬದುಕಿನಲ್ಲಾದ ಭಾವನೆಯನ್ನು ಕಲಾವಿದನ ಅಭಿವ್ಯಕ್ತಿಯನ್ನು ರಂಭೂಮಿಯ ಮೂಲಕ ವ್ಯಕ್ತಪಡಿಸುವ ಮಾಧ್ಯಮವೇ ನಾಟಕ.

 ಬ್ರಹ್ಮನು ಋಗ್ವೇದದಿಂದ ಪಠ್ಯ-ಗೀತವನ್ನು ಸಾಮವೇದದಿಂದ ಅಭಿನಯವನ್ನು ಅಥರ್ವಣ ವೇದದಿಂದ ರಸವನ್ನು ಆರಿಸಿಕೊಂಡು ನಾಟ್ಯ ಸೃಷ್ಟಿ ಮಾಡಿದನು. ಇದು ಪಂಚಮವೇದವಾಯಿತು. ಎಲ್ಲರೂ ನೋಡಬಹುದಾದ ಮಾಧ್ಯಮವೇ ಆಯಿತು ಎಂಬ ತಿಳುವಳಿಕೆ ಬರುವಂತೆ ಭರತನು ವಿವರಗಳನ್ನು ನೀಡುವನು. ಒಟ್ಟಾರೆ ನಾಟಕದ ವಿಷಯದಲ್ಲಿ ಭಾರತೀಯರ ನಂಬುಗೆ ಪಾವಿತ್ರö್ಯತೆಯಿಂದ ಕೂಡಿದೆ.

 ಗ್ರೀಕ್ ನಾಟಕ ಕ್ಷೇತ್ರದಿಂದ ಭಾರತೀಯ ಭಾಷೆಯವರೆಗೂ ನಾಟಕ ಸಾಹಿತ್ಯದ ಕುರಿತು ಅವಲೋಕಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ರಂಗಭೂಮಿ ಮತ್ತು ನಾಟಕ ಸಾಹಿತ್ಯದ ದೃಷ್ಟಿಯಿಂದ ಭಾರತೀಯ ನಾಟಕ ಪರಂಪರೆಗೆ ಜಾನಪದವೇ ಆಧಾರವಾಗಿತ್ತೆಂದು ತಿಳಿದುಕೊಳ್ಳಬೇಕು. ಜಾನಪದದಲ್ಲಿರುವ ಯಕ್ಷಗಾನ, ಬಯಲಾಟ, ಸಣ್ಣಾಟ ಮುಂತಾದ ಜಾನಪದ ಪ್ರಕಾರಗಳು ರಂಗಭೂಮಿಗೆ ತಮ್ಮದೇ ಆದ ಕಸುವುಗಳನ್ನು ಕುದುರಿಸಿದವು. ಈ ಮಾತು ರಂಗಭೂಮಿಗಷ್ಟೇ ಸೀಮಿತವಾದಲ್ಲಿ ಭಾರತೀಯ ಎಲ್ಲಾ ಭಾಷೆಗಳಿಗೂ ಅನ್ವಯವಾಗುತ್ತದೆ. ಲಲಿತ ಕಲೆಗಳಲ್ಲೊಂದಾದ ನಾಟಕಕಲೆ, ದೃಶ್ಯಕಲೆ ಹಾಗೂ ಪ್ರದರ್ಶನ ಕಲೆಗಳನ್ನೊಳಗೊಂಡಿದೆ. ಅಂದರೆ ಸಾಹಿತ್ಯ, ಅಭಿನಯ, ಪ್ರಸಾಧನ, ಸಂಗೀತ, ನೆರಳು ಬೆಳಕು, ಚಿತ್ರಕಲೆ, ಸಂಭಾಷಣೆ, ಸಮಯಪ್ರಜ್ಞೆ ಎಲ್ಲವನ್ನೂ ರೂಢಿಸಿಕೊಂಡು ಭಾವಾಭಿವ್ಯಕ್ತಿ ಪ್ರದರ್ಶಿಸುವುದು ಸರಳವಾದುದಲ್ಲ. ಆದ್ದರಿಂದ ನಾಟಕ ಬದುಕಿನ ಬದ್ಧತೆ ಮತ್ತು ಪ್ರಬುದ್ಧತೆಯನ್ನು ಕಲಿಸುತ್ತದೆ. ಅದರಂತೆ ಲಲಿತ ಕಲೆಗಳಲ್ಲಿ ಗುರು ಪರಂಪರೆ ಇನ್ನೂ ರೂಢಿಯಲ್ಲಿರುವುದನ್ನು ಕಾಣುತ್ತೇವೆ. ಸಂಗೀತ, ನೃತ್ಯ, ನಾಟಕ, ಶಿಲ್ಪ, ವಾಸ್ತುಶಿಲ್ಪ, ಕಲಾವಿದರು ಗುರುವಿನ ಪಾದಗಳಿಗೆ ನಮಸ್ಕರಿಸಿ ತಮ್ಮ ಅಭ್ಯಾಸದಲ್ಲಿ ತೊಡಗುವ ಸಂಸ್ಕೃತಿ ಆರೋಗ್ಯ ಹಾಗೂ ಭಕ್ತಿಪೂರ್ಣವಾದದ್ದು. ಆದರೆ ಚಿತ್ರಕಲೆಯಲ್ಲಿ ಈ ಪದ್ಧತಿ ವಿರಳ.

ನಾಟಕ ವಿಲಾಸಕ್ಕಲ್ಲ ವಿಕಾಸಕ್ಕಾಗಿ ಎನ್ನುವಂತೆ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಜಾಗೃತಗೊಳಿಸಲು ರಂಗಭೂಮಿ ವೇದಿಕೆಯಾಗಿದೆ. ಇಂದಿನ ಆಡಂಬರದ ತಂತ್ರಜ್ಞಾನದ ಆಕರ್ಷಣೆಗೆ ನಾಟಕ ಕಲೆಯನ್ನು ನೋಡುವುದಷ್ಟೇ ಅಲ್ಲ ಮಾಡುವ ಹವ್ಯಾಸವನ್ನೂ ಕಳೆದುಕೊಳ್ಳುವ ಕಾಲದಲ್ಲಿ ನೀನಾಸಂ ಎಂಬ ರಂಗಶಿಕ್ಷಣ ಶಾಲೆ ಮತ್ತು ರಂಗಾಯಣದAತಹ ಕೇಂದ್ರಗಳು ನಾಟಕಕ್ಕೆ ನವ್ಯ ಸ್ಪರ್ಶ ನೀಡಿದ ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣರ ಸೃಜನಶೀಲತೆಯಲ್ಲಿ ಇನ್ನೂ ನಾಟಕಗಳು ಜೀವಂತ ಸಾಕ್ಷಿಯಾಗಿ ನಿಂತಿವೆ.

 ಷೇಕ್ಸಪಿಯರ್ ಎಂಬ ಮಹಾನ್ ನಾಟಕಕಾರ ಹಲವಾರು ದುಖಾಂತ್ಯ ಹಾಗೂ ಸುಖಾಂತ್ಯ ನಾಟಕಗಳನ್ನು ಈ ಜಗತ್ತಿಗೆ ಕೊಡುಗೆ ನೀಡಿದ್ದಾರೆ. ಬಣ್ಣದ ಬದುಕಲ್ಲಿ ಬದುಕನ್ನು ಕಟ್ಟಿಕೊಂಡ ಚಾರ್ಲಿ ಚಾಪ್ಲಿನ್, ಟಿ.ಪಿ.ಕೈಲಾಸಂರ ನಾಟಕಗಳು ಸಮಾಜದ ಅಂಕುಡೊAಕುಗಳನ್ನು ತಿದ್ದತ್ತವೆ. ಕಾಳಿದಾಸ ಭಟ್ಟನಾರಾಯಣ, ಭವಭೂತಿ, ಶೂದ್ರಕ ಮುಂತಾದವರ ಸಂಸ್ಕೃತ ನಾಟಕಗಳಲ್ಲಿ ಹಲವು ಪ್ರಸಿದ್ಧ ಕೃತಿಗಳು ಕನ್ನಡಕ್ಕೆ ಕಾಲಿರಿಸಿದವು. ಬೆಳ್ಳಾವೆ ನರಹರಿ, ಚುರುಮುರಿ ಶೇಷಗಿರಿರಾಯರು, ಬಸವ ಶಾಸ್ತಿçಗಳು ಮುಂತಾದವರು ಈ ಅನುವಾದದಲ್ಲಿ ತೊಡಗಿದ್ದರು. ಮಿತ್ರಾವಿಂದ ಗೋವಿಂದ ನಾಟಕ ಕನ್ನಡದ ಮೊದಲ ನಾಟಕವೆಂದು ಉಲ್ಲೇಖಿಸುತ್ತದೆ. ಆದರೆ ಓ.ಎನ್.ಲಿಂಗಣ್ಣನವರು ಕನ್ನಡದ ಶಾಂತಕವಿಯ ಸ್ವಾತಂತ್ರö್ಯ ನಾಟಕ ಪ್ರಭುನಾಟಕವೆಂದು ತಿಳಿಸುತ್ತಾರೆ. ನಂತರ ಕನ್ನಡದಲ್ಲಿ ವೃತ್ತಿಪರ ಮತ್ತು ಹವ್ಯಾಸಿ ರಂಗಭೂಮಿಗಳೆರಡರ ನಡುವೆ ನಾಟಕ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರಯತ್ನ ಸಾಗಿದೆ. ಕನ್ನಡ ರಂಗಭೂಮಿಯಲ್ಲಿ ಬಾಳಾಚಾರ್ಯ ಸಕ್ರಿ, ಶಾಂತಕವಿ, ವಾಮನರಾವ್ ಮಾಸ್ತರ, ಶ್ರೀನಿವಾಸರು, ಕೆ.ವಿ.ಸುಬ್ಬಣ್ಣ, ವೆಂಕಟಚಾರ ಏಣಗಿ ಬಾಳಪ್ಪ, ಶಿರಹಟ್ಟಿ ವೆಂಕೋಬಾರಾವ್, ಎಚ್.ಎನ್.ಹೂಗಾರ್, ಗುಬ್ಬಿ ವೀರಣ್ಣ, ಡಾ. ಕಂಬಾರ, ಡಾ. ಚಂಪಾ, ಜಿ.ಬಿ.ಜೋಶಿ, ಹುಲಶೇಖರ, ಚದುರಂಗ ಮುಂತಾದವರು ಇಂದಿನ ಆಧುನಿಕ ರಂಗಭೂಮಿಯ ಕಳಕಳಿ ಕಾರ್ಯಪ್ರವ್ರತ್ತರಾಗಿದ್ದರು. ಅದರ ಕಾರ್ಯಫಲವಾಗಿ ಕನ್ನಡ ರಂಗಭೂಮಿಯ ಇಂದಿನ ತಂತ್ರಜ್ಞಾನದ ದಿನಗಳಲ್ಲೂ ಅಸ್ತಿತ್ವದಲ್ಲಿ ಉಳಿದುಕೊಂಡು ಬಂದಿದೆ.

 ನಮ್ಮ ನಾಟಕ ಕಲೆ ಉಳಿಯಬೇಕಾದರೆ ಯುವಕರಲ್ಲಿ ಆಸಕ್ತಿಯನ್ನು ಬಿತ್ತಬೇಕು. ಸರ್ವಾಂಗೀಣ ವಿಕಾಸಕ್ಕಾಗಿ ಪಠ್ಯದ ವಿಷಯವಾಗಬೇಕು. ವಿಭಾಗಕ್ಕೊಂದು ರಂಗಶಾಲೆಯಾಗಬೇಕು. ಅಂದರೆ ನಾಟಕ ಕಲೆ ಮತ್ತು ಕಲಾವಿದರು ಬೆಳೆಯಲು ಸಾಧ್ಯ. ಮನುಷ್ಯನಲ್ಲಿ ಬದ್ಧತೆ, ಪ್ರಬುದ್ಧತೆ ರೂಪಿಸುವ ನಾಟಕ ಕಲೆಗೆ ಪ್ರೋತ್ಸಾಹ ನೀಡಿ. ರಂಗಭೂಮಿ ದಿನಾಚರಣೆಯ ದಿನದಂದು ನಾಟಕ ಕಲೆಗಾಗಿ ದುಡಿದ ಮಿಡಿದ, ಮಡಿದ ಮನಗಳಿಗೆ ಶರಣು ಶರಣಾರ್ಥಿ.

ಲೇಖನ: ಬಸವರಾಜ್ ನೆಲಜೇರಿ, ಗದಗ

Exit mobile version