ಸಂಘಟನಾ ಶಕ್ತಿಯಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ

ಮಾಜಿ ಶಾಸಕ ಎಸ್.ಎನ್.ಪಾಟೀಲ ಅಭಿಪ್ರಾಯ

ಲಕ್ಷ್ಮೇಶ್ವರ: ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಧೈರ್ಯ, ಆತ್ಮವಿಶ್ವಾಸ ಹೆಚ್ಚಿ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಮಾಜಿ ಶಾಸಕ ಎಸ್.ಎನ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಭಾನುವಾರ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಲಕ್ಷ್ಮೇಶ್ವರ ತಾಲೂಕು ಟೇಲರಿಂಗ್ ಮಾಲಿಕರ ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ವ್ರತ್ತಿಗೂ ಅದರದ್ದೇ ಆಗ ಮಹತ್ವ-ಗೌರವ ಇರುತ್ತದೆ. ಟೇಲರಿಂಗ್ ವೃತ್ತಿಯು ಮನುಷ್ಯನ ಮಾನ, ಗೌರವ, ಆರೋಗ್ಯ ಕಾಪಾಡುವ ಜತೆಗೆ ವ್ಯಕ್ತಿತ್ವ ಪ್ರತಿಬಿಂಭಿಸುವ ಶ್ರೇಷ್ಠತೆಯನ್ನು ಹೊಂದಿದೆ. ಟೇಲರಿಂಗ್ ವೃತ್ತಿಯಿಂದಲೇ ಜೀವನ ನಡೆಸುತ್ತಾ ಬಂದಿರುವ ಸಾವಿರಾರು ಸಂಖ್ಯೆಯ ಜನರ ಬದುಕು ಇಂದು ಆಧುನಿಕತೆಯ ಪ್ರಭಾವದಿಂದ ಬೀದಿಗೆ ಬೀಳುವಂತಾಗಿದೆ. ರೆಡಿಮೇಡ್ ಬಟ್ಟೆ ತಯಾರಿಕೆ ಕೈಗಾರಿಕೆಗಳು ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಟೇಲರಿಂಗ್ ವೃತ್ತಿಯಿಂದಲೇ ಬದುಕು ಸಾಗಿಸುತ್ತಿದ್ದವರ ಜೀವನ ನಿರ್ವಹಣೆ ಕಷ್ಟವಾಗಿದೆ. ಕರೊನಾ ಹಾವಳಿ ಪ್ರಾರಂಭವಾದಾಗಿದ ಟೇಲರಿಂಗ್ ವೃತ್ತಿ ಬಾಂಧವರ ಗೋಳು ಹೇಳತೀರದಾಗಿದೆ. ಆದ್ದರಿಂದ ಸರ್ಕಾರ ಇವರ ಬದುಕಿಗೆ ಆಸರೆ ಕಲ್ಪಿಸುವ, ಕಷ್ಟಕ್ಕೆ ಸ್ಫಂಧಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ದೇಶಪಾಂಡೆ ಫೌಂಡೇಶನ್‌ನ ಪ್ರೋಜೆಕ್ಟ್ ಮ್ಯಾನೇಜರ್ ವೀರಯ್ಯ ಹಿರೇಮಠ, ತುಕಾರಾಮ ಜಾಧವ ಮಾತನಾಡಿ, ಸಂಘಟನಾ ಶಕ್ತಿಯಿಂದ ಸಾಮುದಾಯಿಕವಾಗಿ ಅಭಿವೃದ್ಧಿ ಹೊಂದಲು ಸಾದ್ಯ. ಸಂಘದ ಅಡಿಯಲ್ಲಿ ವೃತ್ತಿ ಬಾಂಧವರೆಲ್ಲ ಸೇರಿ ಸ್ವಾವಲಂಬಿ ಬದುಕಿಗೆ ಪೂರಕವಾದ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಸಂಘದ ಸದಸ್ಯರಲ್ಲಿ ವಿಶಾಲ ಮನೋಭಾವ, ಸಮಾನ ಮನಸ್ಸು ಮುಖ್ಯವಾಗುತ್ತದೆ. ರಾಜ್ಯದಲ್ಲಿಯೇ ಮೊದಲನೇಯದಾಗಿ ಸಂಘಟಿತವಾದ ಟೇಲರ್ ವೃತ್ತಿ ಬಾಂಧವರ ಸಂಘಟನೆ ರಾಜ್ಯಕ್ಕೆ ಮಾದರಿಯಾಗಲಿ ಎಂದರು.

ಸಂಘದ ನೂತನ ಅಧ್ಯಕ್ಷ ರಾಮಚಂದ್ರಸಾ ಮೇಘರಾಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಉಪಾಧ್ಯಕ್ಷ ರಾಮು ಗಡದವರ, ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಾಕ ಶಿರಹಟ್ಟಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ಗೌಸುಸಾಬ್ ಕಾರಡಗಿ, ರಿಯಾಜಮ್ಮದ ಕಲಬುರ್ಗಿ, ಪ್ರವೀಣ ಬೋಮಲೆ ಉಪಸ್ಥಿತರಿದ್ದರು.

ಈ ವೇಳೆ ತಾಲೂಕಿನ ಹಿರಿಯ ಟೇಲರ್‌ಗಳಾದ ಫಕ್ಕೀರಪ್ಪ ಬೋಮಲೆ, ಮಾರುತಿರಾವ್ ಮಾಳೋದಕರ್, ಶಂಕ್ರಪ್ಪ ನಾಗಲೋಟಿ, ಸಿದ್ದಪ್ಪ ಶಿರಹಟ್ಟಿ, ಶ್ರೀಪತಿ ಸಿಂಗಟಾಲೂರ, ನಾಗೇಂದ್ರಪ್ಪ ಬೋಮಲೆ, ಆನಂದಪ್ಪ ಬೋಮಲೆ, ಶಿವಗಂಗವ್ವ ಮಲ್ಲಾಡದ, ಸುಶೀಲವ್ವ ಕಾರಡಗಿ, ಗೂಳಪ್ಪ ಮಾಯಕೊಂಡ ಸೇರಿ ಅನೇಕರನ್ನು ಸನ್ಮಾನಿಸಲಾಯಿತು. ಈ ವೇಳೆ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು. ಸಂಘದ ಮಂಜುನಾಥ ಗೊರವರ, ದೀಪಕ ಪವಾರ, ಶಿಕ್ಷಕ ಈಶ್ವರ ಮೆಡ್ಲೇರಿ ಆಯ್ಕೆ ಆಗಿದ್ದಾರೆ.

Exit mobile version