ಸರ್ಕಾರದ ಸೌಲಭ್ಯಗಳಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿದೆ

ಗಜೇಂದ್ರಗಡ: ಪಟ್ಟಣದ ಜನತೆ ವಸತಿ ಸೇರಿ ಹತ್ತು ಹಲವಾರು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಸ್ವಾರ್ಥಪರ ಚಿಂತನೆ ನಡೆಸುವ ಮೂಲಕ ಸಾರ್ವಜನಿಕರನ್ನು ಕಡೆಗಣಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆರೋಪಿಸಿದರು.

ಪಟ್ಟಣದ ತಹಶಿಲ್ದಾರ ಕಚೇರಿ ಆವರಣದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಮನೆ ನೀಡಲು ಹಾಗೂ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸಿಪಿಐಎಂ ನಿಂದ ರವಿವಾರ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಒಂದೆಡೆ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಗೆ ಮುಗಿಲು ಮುಟ್ಟಿದ್ದು, ಇದರಿಂದ ಜನರು ಬದುಕಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಪಟ್ಟಣದಲ್ಲಿ ವಸತಿ ಯೋಜನೆಗಳಿಗೆ ಸಂಬಂಧಿಸಿದ ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆಡಳಿತ ಪಕ್ಷದವರನ್ನು ಪ್ರಶ್ನಿಸಬೇಕಾದ ವಿಪಕ್ಷದವರೇ ಮೌನಕ್ಕೆ ಶರಣಾದರೆ, ಸಾರ್ವಜನಿಕರ ಗತಿ ಏನು ಎಂದು ಪ್ರಶ್ನಿಸಿದರು.

ಬಾಲು ರಾಠೊಡ ಮಾತನಾಡಿ, ಸೂರಿಲ್ಲದವರಿಗೆ ಸೂರು ಕಲ್ಪಿಸುವ ಬದಲಿಗೆ ಹಣ ಕೊಟ್ಟವರಿಗೆ ನಿವೇಶನ ನೀಡುತ್ತಿದ್ದಾರೆ. ಪುರಸಭೆ ಸದಸ್ಯರು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬಹುತೇಕ ಕುಟುಂಬಗಳು ನಿವೇಶನದಿಂದ ವಂಚಿತರಾಗಿದ್ದು, ಇದರಿಂದ ಮನೆಯಿಲ್ಲದವರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇನ್ನೊಂದೆಡೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯಬೇಕಾದ ಪ್ರೋತ್ಸಾಹ ಧನ ಸಹ ನೀಡುತ್ತಿಲ್ಲ. ಸಾಲ ಸೂಲ ಮಾಡಿ ಮನೆ ಕಟ್ಟಿಕೊಂಡವರ ಬದಕು ಬೀದಿಗೆ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಜನರ ಬಳಿ ಬರುತ್ತಾರೆ. ಆದರೆ, ಸಾರ್ವಜನಿಕರ ಸಮಸ್ಯೆಗಳು ಮಾತ್ರ ಅವರಿಗೆ ಬೇಕಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಹೋರಾಟ ಸಮಿತಿ ರಚಿಸುವ ಮೂಲಕ, ಫಲಾನುಭವಿಗಳಿಗೆ ನ್ಯಾಯ ದೊರೆಯುವವರೆಗೂ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಎಚ್ಚರಿಕೆ ನಿಡಿದರು.

ಪೀರು ರಾಠೋಡ, ಮಾರುತಿ ಚಿಟಗಿ, ಫಯಾಜ್ ತೋಟದ, ಮೈಬು ಹವಾಲ್ದಾರ, ಗಣೇಶ ರಾಠೋಡ, ಕಳಕಪ್ಪ ಹೊಸಮನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Exit mobile version