ಚಿಲಝರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಗಜೇಂದ್ರಗಡ: ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳು ವೃದ್ದಿಸುತ್ತವೆ ಈ ನಿಟ್ಟಿನಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಿ ಸ್ವಾಸ್ಥ್ಯೇಯ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

ಸಮೀಪದ ಚಿಲಝರಿ ಗ್ರಾಮದ ಶಿವಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜಿವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಈ ನಿಟ್ಟಿನಲ್ಲಿ ಸರ್ವರು ಸಮಾನತೆಯ ಸಂಕಲ್ಪ ತೊಟ್ಟು ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಸಮಾಜದಲ್ಲಿ ಅನ್ಯುನ್ನತೆ ಮೂಡುತ್ತದೆ. ಈ ಜಗದಲ್ಲಿ ದೇವರು ಸರ್ವಾಂತರಯಾಮಿಯಾಗಿದ್ದಾನೆ. ಭಾವೈಕ್ಯತೆಯಿಂದ ಸಮೂದಾಯ ಮತ್ತು ಸುತ್ತಲಿನ ಜನರೊಂದಿಗೆ ಬಾಳಿದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.

ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹ ಬಡ ಜನರನ್ನು ಸಾಲದಿಂದ ಮುಕ್ತಿ ಮಾಡಲಿವೆ. ಶ್ರೀಮಂತರು ತಾವು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸತ್ಕಾರ್ಯಕ್ಕೆ ಬಳಸಬೇಕು. ಅಂದಾಗ ಮಾತ್ರ ಪುಣ್ಯ ಪ್ರಾಪ್ತವಾಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಿ ಸ್ವಾಸ್ಥ್ಯೇಯ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕಿದೆ. ಮದುವೆ ಬಡ ಕುಟುಂಬಗಳಿಗೆ ಹೊರೆಯಾಗಿದ್ದನ್ನು ಇಳಿಸಲು ಸಾಮೂಹಿಕ ವಿವಾಹ ಸಹಕಾರಿಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ವಧು-ವರರು ನವ ದಾಂಪತ್ಯಕ್ಕೆ ಕಾಲಿಟ್ಟರು. ಗುಳೆದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಕೊಡಗಾನೂರ ಚಂದ್ರಶೇಖರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶಿವರಾಜ ಗೌಡರ, ಬಿ.ಎಂ.ಸಜ್ಜನರ, ಲೀಲಾವತಿ ಸವಣೂರ, ವಿರೇಶ ರಾಜೂರ, ಶರಣಪ್ಪ ಕಡಬಲಕಟ್ಟಿ, ಕರಿಯಪ್ಪ ನರೇಗಲ್, ಮಹಾದೇವಪ್ಪ ಮಂಡಾಲಿ, ಶರಣಪ್ಪ ಉಪ್ಪಾರ, ಆನಂದ ಗುಡಿಹಾಳ, ಪ್ರಭು ನಾಯ್ಕರ, ಲಕ್ಷ್ಮಣ ನಾಯ್ಕರ, ಸುನೀಲ ಚವ್ಹಾಣ, ವಿಜಯಪ್ಪ ಉಪ್ಪಾರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Exit mobile version