ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದಿಂದ ಖಂಡನೆ

ಗದಗ: ರಾಜ್ಯ ಸರ್ಕಾರ ಶೇ.30ರಷ್ಟು ಖಾಸಗಿ ಶಾಲಾ ಶುಲ್ಕ ಕಡಿತಗಿಳಿಸಿದ್ದನ್ನು ಖಂಡಿಸಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಕಚೇರಿ ಎದುರು ಖಾಸಗಿ ಶಾಲಾ ಶಿಕ್ಷಕರ ಸಂಘ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಕೊರೊನಾದಿಂದ ಖಾಸಗಿ ಅನುದಾನ ರಹಿತ ಶಾಲೆಗಳ ಪರಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ಶಾಲಾ ಶುಲ್ಕದಲ್ಲಿ ಶೇ.30 ರಷ್ಟು ಕಡಿತಗೊಳಿಸಿದ್ದು, ಇತರೆ ಯಾವುದೇ ಶುಲ್ಕಗಳನ್ನು ತೆಗೆದುಕೊಳ್ಳಬಾರದು ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಅವೈಜ್ಞಾನಿಕ ಕ್ರಮದಿಂದ ಶಾಲೆಗಳಲ್ಲಿ ಶೇ.55 ರಿಂದ ಶೇ.65ರಷ್ಟು ಶುಲ್ಕ ಕಡಿತವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಆದೇಶದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಸಂಬಳದ ಮೇಲೆ ದುಷ್ಪರಿಣಾಮ ಬೀರುವುತ್ತಿದೆ. ಶಿಕ್ಷಣ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಗೆ ತಲುಪುತ್ತದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ನೇರವಾಗಿ ಆರ್ಥಿಕ ಸಂಕಷ್ಟಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಿ ಆಯಾ ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳ ಮಧ್ಯ ಒಪ್ಪಂದವಾಗಿರುವ ಸಂಬಳದ ವ್ಯತ್ಯಾಸವನ್ನು ಸರಿಮಾಡಿ ಕೊವಿಡ್ ಸಂಭಂದಿಸಿದ ಪ್ರಸ್ತುತ ಪರಿಸ್ಥಿತಿಯ ಹಿನ್ನಲೆಯಲ್ಲಿ ಆರ್ಥಿಕ ನೆರವು ನೀಡಬೇಕು. ನಮ್ಮ ರಾಜ್ಯದ ತಾಂತ್ರಿಕ ಸಲಹಾ ಸಮಿತಿ ಇತ್ತೀಚಿನ ವರದಿಯಂತೆ 1 ರಿಂದ 5 ನೇ ತರಗತಿಗಳನ್ನು ಸ್ವಾಭಾವಿಕವಾಗಿ ಪ್ರಾರಂಭಿಸುವ ಸಲಹೆ ನೀಡಿದ್ದು ಮಕ್ಕಳ ನಿರಂತರ ಕಲಿಕೆ, ದಾಖಲಾತಿ, ಹಾಜರಾತಿ ಮತ್ತು ಕನಿಷ್ಟ ಕಲಿಕೆಗೆ ಒತ್ತು ನೀಡುವ ಹಿನ್ನಲೆಯಲ್ಲಿ ಸರ್ಕಾರ 1 ರಿಂದ 5 ನೇ ತರಗತಿಗಳ ಶಾಲಾ ಪ್ರಾರಂಭದ ನಿರ್ಧಾರ ತೆಗೆದುಕೊಂಡು ಶಾಲಾ ಪ್ರಾರಂಭಕ್ಕೆ ಆದೇಶಿಸಬೇಕು. ಪ್ರಸ್ತುತ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಭರಿಸಿದಲ್ಲಿ ಮಾತ್ರ ಆ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ಮಾಡಲು ಆಥವಾ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಈ ವರ್ಷ ಅನೇಕ ವಿದ್ಯಾರ್ಥಿಗಳು ಖಾಸಗಿ ಅನುದಾನ ರಹಿತ ಶಾಲೆಗಳಿಂದ ಶುಲ್ಕವನ್ನು ತುಂಬಲು ಮನಸ್ಸಿಲ್ಲದೇ ಸರ್ಕಾರಿ ಶಾಲೆಗಳಿಗೆ ಹೋಗಿದ್ದಾರೆ. ಇದರಿಂದ ಮುಂಗಡವಾಗಿ ಹಣ ತುಂಬಿ ತರಿಸಿದ ಪಠ್ಯ ಪುಸ್ತಕಗಳ ಹಣ ಸಂಸ್ಥೆಗೆ ಹೊರೆಯಾಗಿದೆ. ಆರ್ಥಿಕ ಹೊರೆಯನ್ನು ತಾವು ಕಡಿಮೆ ಮಾಡಲು ಮುಂಬರುವ ವರ್ಷಕ್ಕೆ ಖಾಸಗಿ ಅನುದಾನ ರಹಿತ ಶಾಲೆಗಳಿಗೂ ಸಹ ಉಚಿತ ಪಠ್ಯ ಪುಸ್ತಕಗಳನ್ನು ಒದಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಇದೇ ವೇಳೆ ಖಾಸಗಿ ಶಾಲಾ ಶಿಕ್ಷಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯದರ್ಶಿ ಎಸ್.ವೈ. ಚಿಕ್ಕಟ್ಟಿ, ಆಶೋಕ ಜೈನ್, ಎ.ಎಸ್.ರವಿ, ಡಿ.ಆರ್.ಖುದಾ, ವಿ.ಡಿ. ರಂಗಪ್ಪರಾವ್, ಆರ್.ಕೆ. ಹಬಿಬ್, ಶ್ರೀನಿವಾಸ ಬಾಕಳೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version