ದೇಶದಲ್ಲಿ 7 ಸಾವಿರದಷ್ಟು ರೂಪಾಂತರ ಕೊರೊನಾ ವೈರಸ್

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ನ 7 ಸಾವಿರಕ್ಕೂ ಹೆಚ್ಚು ರೂಪಾಂತರಗಳು ಇರುವ ಸಾಧ್ಯತೆ ಇದ್ದು, ಈ ಪೈಕಿ ಕೆಲವು ಗಂಭೀರ ಅಪಾಯ ಉಂಟುಮಾಡಬಹುದು ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿದ್ದಾರೆ.

ರೂಪಾಂತರ ವೈರಸ್‌ಗಳ ಪೈಕಿ ‘ಎನ್440ಕೆ’ ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಕೋಶ ಹಾಗೂ ಅಣು ಜೀವಶಾಸ್ತ್ರ ಕೇಂದ್ರದ (ಸಿಸಿಎಂಬಿ) ನಿರ್ದೇಶಕರಾಗಿರುವ ರಾಕೇಶ್ ಮಿಶ್ರಾ ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್‌ನ ಸುಮಾರು 5 ಸಾವಿರ ರೂಪಾಂತರಗಳ ಬಗ್ಗೆ ಸಿಸಿಎಂಬಿ ಸಮಗ್ರ ವಿಶ್ಲೇಷಣೆ ನಡೆಸಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಅವು ಹೇಗೆ ವಿಕಸನಗೊಂಡಿವೆ ಎಂಬುದನ್ನೂ ಅಧ್ಯಯನ ನಡೆಸಿದೆ.

ಹೈದರಾಬಾದ್ ಮೂಲದ ಸಿಸಿಎಂಬಿ ಸಂಸ್ಥೆಯು ವೈರಸ್‌ನ ವಿಕಸನ, ರೂಪಾಂತರ ಹಾಗೂ ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಆರಂಭವಾದಾಗಿನಿAದಲೂ ಆ ಬಗ್ಗೆ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ.

ಪ್ರತಿಯೊಂದು ರೂಪಾಂತರವೂ ಹೊಸ ತಳಿಯಾಗಿ ಪರಿವರ್ತನೆಯಾಗುವುದಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ. ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Exit mobile version