ಸಾಮಾಜಿಕ ಜಾಲತಾಣಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ : ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಮತ್ತು ಫೇಸ್ ಬುಕ್, ವಾಟ್ಸ್ ಆಯಪ್ ಮುಂತಾದ ಸಾಮಾಜಿಕ ಜಾಲತಾಣಗಳು ನೆಲದ ನಿಯಮವನ್ನು ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಹರಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ‘ಅದರ ಟ್ವಿಟರ್, ಫೇಸ್ ಬುಕ್, ಲಿಂಕ್ಡ್ ಇನ್ ಅಥವಾ ವಾಟ್ಸ್ ಆಪ್ ಆಗಿರಲಿ, ಅವರಿಗೆ ಭಾರತದಲ್ಲಿ ಕೆಲಸ ಮಾಡಲು ಸ್ವಾಗತ. ಅವರಿಗೆ ಕೋಟಿ ಕೋಟಿ ಅನುಯಾಯಿಗಳು ಇದ್ದಾರೆ, ಆದರೆ ಅವರು ಭಾರತದ ಸಂವಿಧಾನ ಮತ್ತು ಕಾನೂನುಗಳಿಗೆ ಬದ್ಧರಿರಬೇಕು’ ಎಂದು ಹೇಳಿದರು.

ಅಮೆರಿಕದ ಕ್ಯಾಪಿಟಲ್ ಹಿಲ್ ಹಾಗೂ ಕೆಂಪುಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ಕೆಲವು ಮೈಕ್ರೋ ಬ್ಲಾಗಿಂಗ್ ವೇದಿಕೆಗಳು ದ್ವಂದ್ವ ಮಾನದಂಡಗಳನ್ನು ಹಾಕಿವೆ ಎಂದು ರವಿಶಂಕರ್ ಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.

‘ಕ್ಯಾಪಿಟಲ್ ಹಿಲ್ ಸಮಯದಲ್ಲಿ, ನೀವು ಪೊಲೀಸರ ಕಾರ್ಯಾಚರಣೆ ಪರವಾಗಿ ನಿಂತಿದ್ದರೆ ಮತ್ತು ಕೆಂಪುಕೋಟೆಯಲ್ಲಿ ಹಿಂಸಾಚಾರದಲ್ಲಿ ನೀವು ವಿಭಿನ್ನ ನಿಲುವನ್ನು ತೋರಿದ್ದೀರಿ’ ಎಂದು ಟ್ವಿಟರ್ ವಿರುದ್ದ್ಗ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣ ದೈತ್ಯರಿಗೆ ಎಚ್ಚರಿಕೆ ನೀಡಿದ ಅವರು ‘ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹರಡಿಸಲು ಬಳಸಿದರೆ. ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. ತಪ್ಪು ಮಾಹಿತಿ ಪತ್ತೆ ಹಚ್ಚಲು ವೇದಿಕೆ ಯನ್ನು ಮಾಡಿದ್ದೇವೆ ಮತ್ತು ಎಲ್ಲಾ ಫೇಕ್ ನ್ಯೂಸ್ ಐಟಂಗಳನ್ನು ಸಿಸ್ಟಂ ನಿಂದ ತೆಗೆಯಲಾಗುವುದು ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಟ್ವಿಟರ್ ಗೆ ಮನವಿ ಮಾಡಿದ ನಂತರ ಈ ಹೇಳಿಕೆ ಹೊರ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್, ಸರ್ಕಾರದ ದೂರಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುವುದಾಗಿ ಬ್ಲಾಗ್ ನಲ್ಲಿ ಪ್ರಕಟಿಸಿದೆ.

Exit mobile version