ಬೆಂಗಳೂರು: ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡುವಾಗೆಲ್ಲಾ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ರೈತರಿಗೆ ನಮ್ಮ ಬೆಂಬಲ ಖಂಡಿತಾ ಇದ್ದೇ ಇರುತ್ತೆ. ಆದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ. ಆದ್ರೆ ಅಧಿಕಾರ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ ಕನ್ನಡದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾರೆ.
ರೈತರ ಹೋರಾಟಕ್ಕೆ ಕಲಾವಿದರು, ಸಿನೆಮಾ ಮಂದಿಗಳು ಬೆಂಬಲ ಕೊಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಬಂದ ಬೆನ್ನಲ್ಲೇ ಶಿವರಾಜ್‌ಕುಮಾರ್ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ ಅಂತಿದ್ದಾರೆ. ಆದರೆ ನಾವು ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿಗೆ ಇಳಿಯೋದರಿಂದ ಏನೂ ಸಾಧ್ಯವಾಗುವುದಿಲ್ಲ. ಹಾಗೇ ಸಾಧ್ಯವಾಗುವುದಿದ್ದರೆ ನಾವು ಬೀದಿಗಿಳಿಯಲು ಸಾಧ್ಯ. ಅದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯ ಎಂದು ಹೇಳಿದ್ದಾರೆ.
ಶಿವರಾಜ್‌ಕುಮಾರ್ ರೈತ ಹೋರಾಟಕ್ಕೆ ಬೆಂಬಲ ನೀಡುವುದು ಇದೇ ಮೊದಲಲ್ಲ. ದೆಹಲಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ ಆರಂಭದ ದಿನದಲ್ಲೇ ಶಿವರಾಜ್‌ಕುಮಾರ್ ಅವರು ಟ್ವೀಟ್ ಮುಖಾಂತರ ಬೆಂಬಲ ಸೂಚಿಸಿದ್ದರು. ರೈತ ದೇಶದ ಬೆನ್ನೆಲುಬು, ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ನಟ ಶಿವಣ್ಣ ಪ್ರತಿಕ್ರಿಯಿಸಿದ್ದರು.
ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನ್ನ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿ ಮಾಡಿದ ಒಂದು ಟ್ವೀಟ್ ಬಳಿಕ ಬಾಲಿವುಡ್ ನಟ-ನಟಿಯರು ರೈತ ಹೋರಾಟದ ಪರ-ವಿರೋಧ ನಿಲುವು ವ್ಯಕ್ತಪಡಿಸಿದ್ದರು. ಕನ್ನಡದ ನಟರು ಕೂಡಾ ಬಹಿರಂಗವಾಗಿ ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ಅಭಿಮಾನಿಗಳು, ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದರು.
