ಮಾಗಡಿಯಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ

ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಮಾಗಡಿಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಬಡವರ ಆರ್ಥಿಕ ಜೀವನ ಮಟ್ಟ ಸುಧಾರಣೆಗಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಅದರಲ್ಲಿ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿ ಪ್ರೋತ್ಸಾಹ ನೀಡುತ್ತಿದೆ. ಉತ್ತಮ ತಳಿಗಳ ಅಭಿವದ್ಧಿ ಪಡಿಸುವ ನಿಟ್ಟಿನಲ್ಲಿ ಹಸುಗಳ ಸಾಕುವ ರೈತರಿಗೆ ಹುರಿದುಂಬಿಸಲು ಉತ್ತಮ ರಾಸುಗಳಿಗೆ ಹಾಗೂ ಕರುಗಳಿಗೆ ಬಹುಮಾನ ವಿತರಣೆ ಮಾಡುತ್ತಿದೆ. ರೈತರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಅಲ್ಲದೆ ಗೋ ಹತ್ಯೆ ಮಹಾಪಾಪ ಅದನ್ನು ಸರ್ಕಾರ ನಿಷೇಧಿಸಿದದ್ದು, ಅದಕ್ಕೆ ನಾವೆಲ್ಲರೂ ಬೆಂಬಲ ನೀಡೋಣ ಎಂದು ಹೇಳಿದರು.

ಪಶು ವೈದ್ಯಾಧಿಕಾರಿ ಡಾ.ಡಿ.ಬಿ.ಹಕ್ಕಾಪಕ್ಕಿ ಮಾತನಾಡಿ, ಹಸು ಕರು ಹಾಕಿ 15 ನಿಮಿಷದೊಳಗೆ ಗಿಣ್ಣದಹಾಲು ಕುಡಿಸಿದರೆ ರೋಗ ನಿರೋಧಕ ಶಕ್ತಿ ಹಾಗೂ ಕರು ದಷ್ಟಪುಷ್ಟವಾಗಿ ಬೆಳೆಯುತ್ತದೆ. ಕರು ಹುಟ್ಟಿ ವಾರದೊಳಗೆ ಜಂತು ನಾಶಕ ಔಷ ಹಾಕಿದರೆ ಉತ್ತಮ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ. ಮಿಶ್ರ ತಳಿ ಹಸು ಮತ್ತು ಕರುಗಳನ್ನು ಪ್ರತಿ ತಿಂಗಳಿಗೊಮ್ಮೆ ಜಂತು ನಿವಾರಣಾ ಲಸಿಕೆ ಹಾಕಿಸಬೇಕಿದ್ದು ಅಂದಾಗ ಅವುಗಳು ಸದೃಢವಾಗಿ ಬೆಳೆಯಲಯ ಸಾಧ್ಯ ಎಂದರು.

ಜಿಪಂ ಸದಸ್ಯೆ ದೇವಕ್ಕ ಲಮಾಣಿ, ಗ್ರಾಪಂ ಸದಸ್ಯೆ ರತ್ನವ್ವ ತೋಟದ, ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ಲಕ್ಷ್ಮವ್ವ ಸುಣಗಾರ, ಸುಮಿತ್ರಾ ಕೋಳಿವಾಡ, ಡಾ.ಎಸ್.ಎಸ್.ಹೊಸಮಠ, ಜೆ.ಜೆ.ತಾಂಬೂತಿ, ನಾಗಸಮುದ್ರ, ಮಂಜುನಾಥ ಅಮರಾಪೂರ, ರೇಷ್ಮಾ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

Exit mobile version