ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಒತ್ತಾಯ: ಲಂಬಾಣಿ ಸಮಾಜದ ಅಪ್ರಾಪ್ತ ಬಾಲಕಿ ಹತ್ಯೆಗೈದ ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹ

ಹೊಸಪೇಟೆ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುರಗಲವಾಡಿ ಗ್ರಾಮದಲ್ಲಿ ಗುಳೆಹೋದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಅತ್ಯಂತ ಖಂಡನಾರ್ಹ. ಲಂಬಾಣಿ ಸಮಾಜದವರು ಬಹಳಷ್ಟು ಸ್ವಾಭಿಮಾನಿಗಳು. ಆದರೆ ತುತ್ತಿನ ಚೀಲ ತುಂಬಿಕೊಳ್ಳಲು ಗುಳೆಹೋಗುವುದು ನಮಗೆ ಅನಿವಾರ್ಯವಾಗಿದೆ. ಆದರೆ ಗುಳೆಹೋದಂತಹ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ದುಷ್ಟರನ್ನು ಗಲ್ಲಿಗೇರಿಸಬೇಕು ಎಂದು ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಆಗ್ರಹಿಸಿದರು.

ಗೋರಸೇನಾ ಸಂಘಟನೆ ಹಾಗೂ ಬಂಜಾರ ಹಕ್ಕು ಹೋರಾಟ ಸಮಿತಿ ವತಿಯಿಂದ ಹೊಸಪೇಟೆ ತಾಲೂಕಿನ ತಾಳೆಬಸಾಪೂರ ತಾಂಡಾದಲ್ಲಿ ಪ್ರಕರಣ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ದಲಿತ ಸಮಾಜದ ಬಾಲಕಿಯ ಮೇಲೆ ಗುಳೆ ಹೋದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದರೇ ಬಡ ಜನರು ತುತ್ತಿನ ಚೀಲ ತುಂಬಿಕೊಳ್ಳುವುದು ಹೇಗೆ? ಪ್ರಕರಣದಲ್ಲಿ ಭಾಗಿಯಾದ ದುಷ್ಟರನ್ನು ಗಲ್ಲಿಗೇರಿಸಬೇಕು. ಈ ದೌರ್ಜನ್ಯಗಳು ನಡೆಯುತ್ತಿದ್ದಾಗಲೂ ಸರ್ಕಾರ ಯಾಕೆ ರಕ್ಷಣೆಗೆ ಬರುತ್ತಿಲ್ಲ. ನಾವು ಇಲ್ಲಿನ ಮೂಲನಿವಾಸಿಗಳಲ್ಲವೆ? ಎಂದು ಪ್ರಶ್ನಿಸಿದರು.

ಕಾಮುಕರ ದೌರ್ಜನ್ಯಕ್ಕೊಳಗಾಗಿ ಹತ್ಯೆಗೀಡಾದ ಬಾಲಕಿಯ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಮತ್ತು ಕುಟುಂಬಸ್ಥರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಲಂಬಾಣಿ ಸಮಾಜದ ಜನರು ಗುಳೆ ಹೋಗುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿ ಮಾಡಿದರೆ ಈ ಸ್ಥಿತಿ ನಮ್ಮ ಸಮಾಜದ ಜನರಿಗೆ ಬರುತ್ತಿರಲಿಲ್ಲ. ಹೀಗಾಗಿ ಗುಳೆ ಹೋದ ಜನರ ಸಮೀಕ್ಷೆಗೆ ಸರ್ಕಾರ ಮುಂದಾಗಬೇಕು. ಮತ್ತು ಈಗಿರುವ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಘಟನೆ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಹತ್ಯೆಗೀಡಾದ ಬಾಲಕಿ ಕುಟುಂಬ ಈ ವಿಚಾರವಾಗಿ ಮಂಡ್ಯಕ್ಕೆ ಹೋಗಿಬರುವುದು ಬಹಳಷ್ಟು ಕಷ್ಟದ ಕೆಲಸ. ಈ  ಕಾರಣದಿಂದ ಈ ಪ್ರಕರಣವನ್ನು ಮಂಡ್ಯದಿಂದ ಬಳ್ಳಾರಿ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಗುರುವಾರ ರಾತ್ರಿಯಿಂದಲೇ ಬೇಡಿಕೆ ಇಡೇರುವವರೆಗೂ ಅಂತ್ಯಕ್ರಿಯೇ ಮಾಡದಂತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಬಳ್ಳಾರಿ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಆರಂಭದಲ್ಲಿ ಪ್ರತಿಭಟನಾಕಾರರು ಈ ವಿಚಾರದಲ್ಲಿ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ನಡೆದುಕೊಂಡ ರೀತಿಯ ವಿರುದ್ಧ ವ್ಯಕ್ತಪಡಿಸಿದರು.

ಗೋರಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ
ಮಾತನಾಡಿದರು.

ಭರವಸೆ ಇಡೇರಬೇಕು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳು ಕೇವಲ ಭರವಸೆ ನೀಡಿದರೇ ಸಾಲದು. ನಮ್ಮ ಸಮಾಜದ ಬಾಲಕಿಗೆ ಆದ ಅನ್ಯಾಯದ ಬಗ್ಗೆ ನಮ್ಮ ಆಕ್ರೋಶ ನಿರಂತರವಾಗಿರುತ್ತದೆ. ಕೂಡಲೇ ತಮ್ಮ ಹಂತದಲ್ಲಿ ಬಾಲಕಿ ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಮತ್ತು ಸರ್ಕಾರದ ಹಂತದಲ್ಲಿ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ರವಿಕಾಂತ ಅಂಗಡಿ, ರಾಜ್ಯಾಧ್ಯಕ್ಷ ಗೋರಸೇನಾ ಕರ್ನಾಟಕ

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸುತ್ತೇನೆ. ನನ್ನ ವ್ಯಾಪ್ತಿಯಲ್ಲಿ ಇಡೇರಬಹುದಾದ ಬೇಡಿಕೆ ಇಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಇನ್ನು ಕುಟುಂಬಕ್ಕೆ ಜಮೀನು ನೀಡುವ ವಿಚಾರ ನನ್ನ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಪ್ರಯತ್ನ ಮಾಡುವೆ ಎಂದರು.

ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ಅರುಣ್ ಚೌವ್ಹಾಣ್, ಗೋರಸೇನಾ ಉಪಾಧ್ಯಕ್ಷ ಜಾಗೋಗೋರ ಶಿವಪ್ಪ, ಶಿವಪ್ರಕಾಶ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಜಾಟೋತ್, ಕೊಪ್ಪಳ ಜಿಲ್ಲಾಧ್ಯಕ್ಷ ವೆಂಕಟೇಶ್ ಜಾಧವ್, ಬಳ್ಳಾರಿ ಜಿಲ್ಲಾಧ್ಯಕ್ಷ ರಾಜು ನಾಯ್ಕ್, ಗೋಪಿ ನಾಯ್ಕ, ಸೇವ್ಯಾ ನಾಯ್ಕ್ ಕುಮಾರ ನಾಯ್ಕ್, ಪರಮೇಶ್ ನಾಯ್ಕ್, ಸಂತೋಷ ಲಮಾಣಿ, ಲಿಂಗಾ ನಾಯ್ಕ್ ಸೇರಿದಂತೆ ಇತರರು ಇದ್ದರು.

Exit mobile version