ಉತ್ತರಪ್ರಭ ಫಲಶೃತಿ: ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ron pwd road

ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ಪ್ರಕಾಶ ಗುದ್ನೇಪ್ಪನವರ

ರೋಣ: ಮನೆ, ಜಾಗೆ, ನೀರು, ಕಟ್ಟಡ ಹೀಗಿಲ್ಲ ತೆರಿಗೆ ಕಟ್ಟುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೆ ಏಕೆ ಸ್ವತಃ ಕಟ್ಟಿದ್ದೇವೆ. ಆದರೆ ಇದ್ಯಾವುದಿದು ಧೂಳಿಗೆ ಕರ ಕಟ್ಟುವುದು ಅಂದ್ಕೊಂಡ್ರಾ?

ಹೌದು, ಇದು ರೋಣ ಪಟ್ಟಣದ ಮುಖ್ಯರಸ್ತೆಯ ವ್ಯಾಪಾರಸ್ಥರ ಸ್ಥಿತಿ. ಒಂದು ಅರ್ಥದಲ್ಲಿ ಇಲ್ಲಿನ ವ್ಯಾಪಾರಸ್ಥರು ಹಲವು ತಿಂಗಳಿಂದ ಧೂಳಿಗೆ ಕರ ಕಟ್ಟುವಂತಾಗಿತ್ತು. ಇಲ್ಲಿನ ವ್ಯಾಪಾರಸ್ಥರ ಪರಿಸ್ಥಿತಿಯ ಕುರಿತು ನಿಮ್ಮ ಉತ್ತರಪ್ರಭ ಪ್ರಕಟಿಸಿದ ವಿಶೇಷ ವರದಿಗೆ ಎಚ್ಚೆತ್ತ ಅಧಿಕಾರಿಗಳು ಶನಿವಾರ ರಸ್ತೆ ಪರಿಶೀಲನೆ ನಡೆಸಿ ದುರಸ್ಥಿ ಕೈಗೊಳ್ಳಬೇಕಿದ್ದ ರಸ್ತೆಯ ಅಳತೆ ಮಾಡಿದರು. ಇದರಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ವ್ಯಾಪಾರಸ್ಥರಿಗೆ ಕೊನೆಗೂ ಕೊಂಚ ಸಮಾಧಾನವಾದಂತಾಗಿದೆ.

ನಮ್ಮ ಸಮಸ್ಯೆಯ ಬಗ್ಗೆ ಉತ್ತರಪ್ರಭ ವರದಿ ಪ್ರಕಟಿಸಿತ್ತು. ವರದಿ ಪರಿಣಾಮ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಸ್ವಲ್ಪ ಸಮಾಧಾನದ ಸಂಗತಿ. ಉತ್ತರಪ್ರಭದ ಈ ಕಾರ್ಯಕ್ಕೆ ತುಂಬ ಕೃತಜ್ಞತೆಗಳು. -ಅಶೋಕ ನವಲಗುಂದ, ವ್ಯಾಪಾರಸ್ಥರು

ಈಗಾಗಲೇ ಬಹುದಿನಗಳಿಂದ ಇಲ್ಲಿನ ವ್ಯಾಪರಸ್ಥರು ನಿತ್ಯ ಧೂಳಿನಿಂದ ಗೋಳಾಡುತ್ತಿದ್ದರು. ಉತ್ತರಪ್ರಭ ನ.15ರ ಸಂಚಿಕೆಯಲ್ಲಿ ಮುಖ್ಯರಸ್ತೆಯ ಧೂಳಿಗೂ ತೆರಿಗೆ ಕಟ್ಟುತ್ತಿರುವ ವ್ಯಾಪಾರಸ್ಥರು! ಎನ್ನುವ ತಲೆ ಬರಹದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಶೀಘ್ರ ದುರಸ್ಥಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದಾರಂತೆ.

ನ.15ರಂದು ಉತ್ತರಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ವಿಶೇಷ ವರದಿ

ನಗರದ ಸೂಡಿ ಕ್ರಾಸ್ ನಿಂದ ಮುಲ್ಲನಬಾವಿ ಕ್ರಾಸ್ ಮತ್ತು ಬಸ್ ನಿಲ್ದಾಣದಿಂದ ಪೋತರಾಜನ ಕಟ್ಟೆಯವರೆಗೆ ಸಿಸಿ ರಸ್ತೆ ಮಾಡುವ ಯೋಜನೆ ಇದೆ ಎಂದು  ಎಚ್.ಎಸ್.ಹೆಬಸೂರ  ಹಾಗೂ  ಸಹಾಯಕ ವಿಭಾಗ ಅಭಿಯಂತರ ರಾಠೋಡ್ ತಿಳಿಸಿದರು.

ಈ ಬಗ್ಗೆ ಉತ್ತರಪ್ರಭದೊಂದಿಗೆ ಮಾತನಾಡಿದ ಸಹಾಯಕ ಅಭಿಯಂತರರು ಹಲವು ತಿಂಗಳಿಂದ ರಸ್ತೆಯ ಸ್ಥಿತಿಯ ಬಗ್ಗೆ ಗಮನಕ್ಕಿದೆ. ಆದರೆ ಅನುದಾನ ಕೊರತೆಯಿಂದ ಕಾಮಗಾರಿ ಕೈಗೊಳ್ಳಲಾಗಿರಲಿಲ್ಲ. ಇದೀಗ ಕೈಗೊಳ್ಳಬೇಕಿದ್ದ ಕಾಮಗಾರಿಯ ಕುರಿತು ಒಟ್ಟು ಅಳತೆಯನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಇಲಾಖೆಯಿಂದ ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ಏನೇ ಆಗಲಿ ಈ ವಿಚಾರದಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡಿಕೊಂಡು ಹೋದರೆ ಸಾಲದು. ದುರಸ್ಥಿ ಕಾರ್ಯಕ್ಕೆ ಶೀಘ್ರ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯ.

Exit mobile version