ಗದಗ: ನಮ್ಗ ನೀರ್ ಇಲ್ದ ಬಾಳ್ ತೊಂದರಿ ಆಗೈತಿ, ಕಾಲಿಲ್ಲದವ್ರು ನಾವ್, ನೀರ್ ಹ್ಯಾಂಗ್ ತರಬೇಕ್ರಿ, ನಮಗ್ಯಾರು ದಿಕ್ಕಿಲ್ಲ. ನೀರಿನ ಸಮಸ್ಯೆ ಬಗೆಹರಿಸ್ರಿ ಅಂತ ಪಂಚಾಯತಿಗೆ ಹೋಗಿ ಹೇಳಿದ್ರ ಪಂಚಾಯತಿಯವ್ರು ದರಕಾರಕ್ಕ ತುಗೋವಲ್ರು. ಹತ್ತು ದಿನದ್ ಹೊತ್ತಾತು. ಹಿಂಗ್ ಬಾಳ್ ಸರಿ ಮೋಟರ್ ಸುಡತೈತಿ. ಆದ್ರ ಇದಕ್ ಯಾವುದು ಶಾಶ್ವತ ಪರಿಹಾರ ಇಲ್ರಿ. ಹಿಂಗಂತ ಹೇಳಿದ್ದು 70ರ ಆಸುಪಾಸಿನಲ್ಲಿರುವ ಅಜ್ಜಿ.

ಕೈಯಲ್ಲೊಂದು ಕೋಲು ಹಿಡಿದು ಖಾಲಿ ಕೊಡವೇ ಭಾರವಾದಂತೆ ಕಾಣುವ ಹಣ್ಣಾದ ಅಜ್ಜಿ, ದಾಹ ನೀಗಿಸಿಕೊಳ್ಳಲು ನೀರು ಅರಸಿ ಹೋಗುವಾಗ ಉತ್ತರಪ್ರಭದ ಎದುರು ಹೇಳಿಕೊಂಡ ಅಸಹಾಯಕತೆಯ ನುಡಿಗಳು ಇವು. ಅದ್ಯಾಕೋ ಗೊತ್ತಿಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮಕ್ಕೂ ತಮ್ಮ ಮೂಲಭೂತ ಸೌಕರ್ಯಗಳಿಗೂ ಒಂದಕ್ಕೊಂದು ಅವಿನಾಭಾವ ಸಂಬಂಧವಿರುವಂತೆ ಕಾಣುತ್ತಿದೆ.

ಹೌದು, ಈಗಾಗಲೇ ಕೆಲದಿನಗಳ ಹಿಂದಷ್ಟೆ ಇಲ್ಲಿನ ವಡ್ಡರ್ ಪಾಳ್ಯದ ಜನರ ಬವಣೆಯ ಕುರಿತು ನಿಮ್ಮ ಉತ್ತರಪ್ರಭ ಬೆಳಕು ಚೆಲ್ಲಿತ್ತು. ಆದರೆ ಜಿಡ್ಡುಗಟ್ಟಿದ ಆಡಳಿತಕ್ಕೆ ಮಾತ್ರ ಕನಿಷ್ಟ ನೀರಿನ ಸಮಸ್ಯೆ ನೀಗಿಸುವುದು ಕೂಡ ಆಗುತ್ತಿಲ್ಲವೇ? ಅಥವಾ ಆಡಳಿತದ ಬೇಜವಾಬ್ದಾರಿಯೇ ಎನ್ನುವ ಪ್ರಶ್ನೆ ಸ್ಥಳೀಯರದ್ದಾಗಿದೆ.

ಮಳೆ ಬಂದರೆ ಸಾಕು ವಡ್ಡರಪಾಳ್ಯ ಜನರ ಸ್ಥಿತಿ ಅಯೋಮಯವಾಗಿತ್ತು. ಆ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿದ್ದರೇ ಗ್ರಾಮದಲ್ಲಿನ ಮೂಲಭೂತ ಸಮಸ್ಯೆಗಳು ಇಷ್ಟೋತ್ತಿಗೆ ನೀಗಬಹುದಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಆಡಳಿತ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಆದರಹಳ್ಳಿ ಗ್ರಾಮದ 1ನೇ ವಾರ್ಡಿನ ಜನರ ನೀರಿನ ಸಮಸ್ಯೆ ಕಾರಣವಾಗಿದೆ.

ಸಮಸ್ಯೆ ಬಗೆಹರಿಸ್ರಿ

ಜೀವಾ ಬದಕಾಕ ಊಟಕ್ಕಿಂತ ನೀರು ಬಾಳ್ ಮುಖ್ಯ. ನೀರಾ ಇಲ್ಲಂದ್ರ ಜೀವನಾ ಮಾಡೋದಾದ್ರು ಹ್ಯಾಂಗ. ದುಡ್ಡಿದ್ ಅಧಿಕಾರಿಗಳು, ರಾಜಕಾರಣಿಗಳು ರೊಕ್ಕಾ ಕೊಟ್ಟು ಬಾಟ್ಲಿ ನೀರು ಕುಡಿಬಹುದು. ನಮ್ಮಂಥ ಬಡವ್ರು ರೊಕ್ಕಾ ಕೊಟ್ಟು ನೀರು ಕುಡಿಬೇಕಂದ್ರ ಕನಸಿನ ಮಾತಾಗ್ಯೈತಿ. ದಪ್ಪನ್ನ ಚರ್ಮದ್ ಅಧಿಕಾರಿಗಳಿಗೆ ಕಣ್ಣೀದ್ದು ಕುರುಡರಾಗಿರೋ ರಾಜಕಾರಣಿಗಳಿಗೆ ನಮ್ಮ ಗೋಳು ಹ್ಯಾಂಗ್ ಕಾಣುತ್ತ. ಈಗರಾ ನಮ್ ಸಮಸ್ಯೆ ಪರಿಹಾರಕ್ ಮುಂದಾಗಬೇಕು ಅನ್ನೋದು ಸ್ಥಳೀಯರ ಆಕ್ರೋಶ.

1200ಕ್ಕೂ ಹೆಚ್ಚು ಜನಸಂಖ್ಯೆ ಇರುವ ವಾರ್ಡಿನಲ್ಲಿ ಏನು ಕೊಡದಿದ್ರು ಸಾಕು ಕುಡಿಯಾಕ್ ಮುಕ್ ನೀರು ಕೊಡ್ರ್ಯೋ ಯಪ್ಪ ಅಂತ ಜನಾ ಒಂದೇ ಸಮನೆ ಅಂಗಲಾಚುತ್ತಿದ್ದಾರೆ. ಆದರೆ ಗ್ರಾಮ ಪಂಚಾಯತಿಗೆ ಮಾತ್ರ 1ನೇ ವಾರ್ಡಿನ ಜನರು ಗೋಳು ಕೇಳುತ್ತಿಲ್ಲ. ಮುಖ್ಯವಾಗಿ ಕಣ್ಣಿದ್ದು ಕಾಣುತ್ತಿಲ್ಲ. ಪಂಚಾಯತಿಯ  ನಿರ್ಲಕ್ಷ್ಯ ಧೋರಣೆಗೆ ಸ್ಥಳೀಯರು ರೋಸಿ ಹೋಗಿದ್ದಾರೆ. ವಿಕಲಚೇತನರು, ವೃದ್ಧರು, ಮಕ್ಕಳು ನೀರು ಅರಸಿ ಅಲೆಯುವಂತಾಗಿದೆ. ಈ ಬಗ್ಗೆ ಕಳೆದ ಮೂರು ದಿನಗಳ ಹಿಂದೆಯೇ ಇಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ನಿಮ್ಮ ಉತ್ತರಪ್ರಭ ಸಂಪರ್ಕಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿತು. ಆದರೆ ಪಿಡಿಓ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಪಿಡಿಓ ಭರವಸೆ ನೀಡಿ ನಾಲ್ಕು ದಿನವಾಯ್ತು. ಆದರೆ ಪ್ರಯೋಜನ ಮಾತ್ರ ಶೂನ್ಯ. ಇಂತಹ ಬೋಗಸ್ ಭರವಸೆಗಳ ಮೂಲಕ ಅಧಿಕಾರಿಗಳು ಜನರ ಮೂಗಿಗೆ ತುಪ್ಪು ಹಚ್ಚುತ್ತಲೇ ಬಂದಿದ್ದಾರೆ. ಇದರಿಂದ ನಮ್ಮ ಸಮಸ್ಯೆಗಳಿಗೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು 1ನೇ ವಾರ್ಡಿನ ನಿವಾಸಿಗಳು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಾಲ್ ರಿಸಿವ್ ಮಾಡದ ಪಿಡಿಓ

ಆದರಹಳ್ಳಿ ಗ್ರಾಮದ ಒಂದನೇ ವಾರ್ಡಿನ ನೀರಿನ ಸಮಸ್ಯೆಯ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಇನ್ನೇರೆಡು ದಿನದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಪಿಡಿಓ ನಾಲ್ಕು ದಿನಗಳಾದರೂ ಮೋಟರ್ ದುರಸ್ಥಿಗೆ ಮುಂದಾಗಿಲ್ಲ. ರಿಪೇರಿ ಮಾಡಸ್ತೀನಿ ಅಂದೋರು ಯಾಕ್ ರಿಪೇರಿ ಮಾಡಿಸಲಿಲ್ರಿ ಪಿಡಿಓ ಸಾಹೇಬ್ರ ಅಂತ ಕೇಳಾಕ್ ನಿಮ್ಮ ಉತ್ತರಪ್ರಭ ಪಿಡಿಓ ಅವರಿಗೆ ಕಾಲ್ ಮಾಡಿದ್ರ, ಅವರು ಕಾಲ್ ರಿಸಿವ್ ಮಾಡಲಿಲ್ಲ.

ಹೆಚ್ಚು ಮನೆಗಳು ಈ ವಾರ್ಡಿನಲ್ಲಿವೆ. ಆದರೆ ಈಗಾಗಲೇ ಬಹಳಷ್ಟು ದಿನಗಳಿಂದ ನೀರಿನ ಸಮಸ್ಯೆ ನೀಗಿಸಲು ಮಾತ್ರ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ತಿಂಗಳಿಗೆ ಒಂದೆರೆಡು ಬಾರಿ ಕುಡಿಯೋ ನೀರು ಪೂರೈಸುವ ಕೊಳವೆ ಬಾವಿ ಸುಟ್ಟರೆ, ಕನಿಷ್ಟ ಒಂದು ವಾರ ನೀರಿಲ್ಲ. ಆದಾಗ್ಯೂ ಈ ಜನರ ಬವಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಕನಿಷ್ಠ ಸೌಜನ್ಯವೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೋರದೇ ಇರುವುದು ವಿಪರ್ಯಾಸ.

ಇನ್ನಾದರೂ ಒಂದನೇ ವಾರ್ಡಿನ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಮೂಲಕ ದಾಹ ಗಿಸುವ ಕೆಲಸವಾದಾಗ ಮಾತ್ರ  ಈ ಜನರಿಗೆ ನೆಮ್ಮದಿ ಸಿಕ್ಕಂತಾಗುತ್ತದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಸಿಎಮ್ ಬದಲಾವಣೆಗೆ ಪ್ರಯತ್ನ ನಡೆದಿಲ್ಲಾ: ಸಚಿವ ಶಟ್ಟರ್

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಯತ್ನ ನಡೆದಿಲ್ಲ. ಈ ವರೆಗೆ ರಾಜ್ಯ, ನಾಯಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಖಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಯೋಧರಿಗಿಲ್ಲ ಪ್ರಾಮುಖ್ಯತೆ : ಕಾಂಗ್ರೆಸ್ ಟೀಕೆ

ಬಿಜೆಪಿಯ ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಅಂಬಾನಿಗಿರುವ ಪ್ರಾಮುಖ್ಯತೆ ಯೋಧರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟೀಕಿಸಿದೆ.

ವಲಸಿಗರ ರೈಲ್ವೇ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾಗಾಂಧಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ವಲಸಿಗರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಸಿದ್ದರಾಮಯ್ಯ, ಗುಂಡೂರಾವ್ ವಿರುದ್ಧ ಗುಡುಗಿದ ನಳೀನ್ ಕುಮಾರ್!

ಮಂಗಳೂರು : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರ ಪಾಡು ನಾಯಿಪಾಡಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.