ಲಕ್ಷ್ಮೇಶ್ವರ: ಹೇಳಿ, ಹೇಳಿ ಸಾಕಾಗಿ ಹೋಯ್ತು. ಕಾಮಗಾರಿ ಮುಗಿದ್ ಒಂದ್ ತಿಂಗಳದಾಗ ಮಾಡಿದ್ ರೋಡ್ ಹಳ್ಳಾ ಹಿಡಿದೈತಿ. ಬರ್ರಿ.. ನೀವಾರಾ ನೋಡ್ ಬರ್ರಿ.., ಕೆಲ್ಸಾ ಮಾಡಿದ್ ಗುತ್ತಿಗೆದಾರರಾದ್ರು ಯಾರು? ಹಿಂಗೆಲ್ಲ ಹೇಳಿ ಅಧಿಯಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.
ಇಷ್ಟೆಲ್ಲ ಕಳಪೆ ಕಾಮಗಾರಿ ಮಾಡಿದ್ರು ನೀವ್ ಏನ್ ಮಾಡಾಕತ್ತಿರಿ? ನಮ್ ಜೊತಿಗೆ ನೀವಾ ಬರ್ರಿ.. ನೀವು ಒಂದ್ ಸಲ ಕಣ್ತೆರೆದು ರಸ್ತೆ ಸ್ಥಿತಿ ಏನ್ ಆಗೈತಿ ಅಂತ ನೋಡ್ರಿ. ಸರ್ಕಾರದ್ ರೊಕ್ಕಾ ತಗೊಂಡ್ ಹಿಂಗ್ ಕಳಪೆ ಕಾಮಗಾರಿ ಮಾಡಿದ್ರ ಹ್ಯಾಂಗ್? ಅಭಿವೃದ್ಧಿ ಆಗ್ಲಿ ಅಂತ ಸರ್ಕಾರ ರೊಕ್ಕಾ ಕೊಟ್ರ ಕೆಲ್ಸಾ ಮಾಡಿದ್ ಒಂದಾ ತಿಂಗಳದಾಗ ರಸ್ತೆ ಕಿತ್ ಹೋಗುತ್ತಾ ಅಂದ್ರ ಹ್ಯಾಂಗ್? ರಸ್ತೆ ಅಭಿವೃದ್ಧಿ ಮಾಡ್ರಿ ಅಂದ್ರ ಗುತ್ತಿಗೆದಾರರು ತಮ್ಮ ಅಭಿವೃದ್ಧಿ ಮಾಡಿಕೊಂಡ್ರ ಅಭಿವೃದ್ಧಿ ಹೊಂದೋದಾದ್ರೂ ಹ್ಯಾಂಗ್? ಹೀಗೆಲ್ಲ ಮಾತಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಜನ ತರಾಟೆಗೆ ತೆಗೆದುಕೊಂಡರು.
ಲಕ್ಷ್ಮೇಶ್ವರದ ದೊಡ್ಡೂರ ರಸ್ತೆಯು ಸಂಪೂರ್ಣ ಹಾಳಾಗಿದ್ದರಿಂದ ರೈತರು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಜೇಶ್ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡು ಸುಮಾರು ಎರಡು ಕಿಮೀ ವರೆಗೆ ಟ್ರ‍್ಯಾಕ್ಟರ್ ಮೂಲಕವೇ ರಸ್ತೆಯ ದರ್ಶನ ಮಾಡಿಸಿದರು.
ಈ ವೇಳೆ ರೈತ ಜಗಲಿ ಜನ್ನಪ್ಪ, ದೊಡ್ಡೂರ ರಸ್ತೆಯು ಸಂಪೂರ್ಣ ಕಳಪೆಮಟ್ಟದಿಂದ ಕೊಡಿದೆ. ಈ ರಸ್ತೆಯ ಮೇಲೆ ರೈತರು ಸಾರ್ವಜನಿಕರು ಓಡಾಡಲು ಭಯ ಪಡುತ್ತಿದ್ದಾರೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದೇ ಇದಕ್ಕೆ ಕಾರಣ. ದೊಡ್ಡೂರ ರಸ್ತೆ ನಿರ್ಮಾಣ ಕಾರ್ಯದಲ್ಲಿ ಕಾಮಗಾರಿಗೆ ಯೋಗ್ಯವಾದ ಮಣ್ಣನ್ನು ಕೂಡ ಬಳಕೆ ಮಾಡಿಲ್ಲ. ಚರಂಡಿ ಮಣ್ಣು ಹಾಕಿ ಮಾಡಲಾಗಿದೆ. ಅಲ್ಲಿಯ ಮಣ್ಣನ್ನು ಹಾಕಿದರೆ ರಸ್ತೆ ಹೇಗೆ ತಾಳಿಕೆ ಬರುತ್ತದೆ? ಎಂದು ಪ್ರಶ್ನಿಸಿದರು. ಸರಿಯಾದ ಮೂಹರಂ ಕಡಿ ಕೂಡ ಹಾಕಿಲ್ಲ. ಆದ್ದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಆರೋಪಿಸಿದರು.
ದುರಸ್ತಿ ಮಾಡಿಸಿಕೊಡುತ್ತೇನೆ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ್ದೇನೆ. ಈ ಬಗ್ಗೆ ಸ್ಥಳೀಯರು ಕೂಡ ನನ್ನ ಗನಕ್ಕೆ ತಂದಿದ್ದಾರೆ. ಗುತ್ತಿಗೆದಾರ ಮಾಡಿರುವ ತಪ್ಪಿಗೆ ಇಷ್ಟೆಲ್ಲ ನಡೆದಿದೆ. ನಾನು ದೀಪಾವಳಿ ನಂತರ ರಸ್ತೆಯ ದುರಸ್ತಿ ಮಾಡಿಸಿಕೊಡುತ್ತೇನೆ.
-ರಾಜೇಶ ಪಾಟೀಲ್, ಎಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಈಗ ಬೇಸಿಗೆ ಕಾಲ ಆರಂಭವಾಗಿದೆ ರೈತರು ತಮ್ಮ ದಿನನಿತ್ಯದ ಚಟುವಟಿಗೆ ಈ ರಸ್ತೆಯನ್ನೆ ನಂಬಿಕೊAಡಿದ್ದಾರೆ. ಚಕ್ಕಡಿ ತೆಗೆದುಕೊಂಡು ಬಂದರೆ ಎತ್ತುಗಳು ಹೆದರುತ್ತಿವೆ ಮತ್ತು ಈ ದೊಡ್ಡೂರ ರಸ್ತೆಯಲ್ಲಿಯೇ ಕೆಲವರು ಕೈಕಾಲು ಮುರಿದುಕೊಂಡಿರುವ ಘಟನೆಗಳು ನಡೆದು ಹೋಗಿವೆ ಹಾಗೂ ಇತ್ತಿಚೆಗಷ್ಟೆ ಅಪಘಾತವಾದ ಉದಾಹರಣೆ ಕೂಡ ಇದೆ. ಇಷ್ಟೆಲ್ಲಾ ಇದ್ದರೂ ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.
ಸ್ಥಳಕ್ಕೆ ಬಂದ ಅಧಿಕಾರಿ ರಾಜೇಶ ಪಾಟೀಲ್ ಅವರನ್ನು ಕಂಡ ತಕ್ಷಣ ಅವರನ್ನು ನೋಡಿದ ಸ್ಥಳೀಯರು ಹಾಗೂ ರೈತರು ರಸ್ತೆಯ ಸ್ಥಿತಿ ಹಾಗು ಅದರಿಂದ ಆಗುತ್ತಿರುವ ಸಮಸ್ಯೆ ಹೇಳಿಕೊಳ್ಳಲು ನೆರೆದ ಜನ ಮುಂದಾದರು.
