ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು!

ವಿಜಯಪುರ : ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಅಲ್ಲಿ ಮತ್ತೆ ನೆತ್ತರು ಹರಿದಿದೆ. ಈ ಘಟನೆಯಲ್ಲಿ ಭೀಮಾ ತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಅವರ ಕಾರು ಚಾಲಕ ಲಕ್ಷ್ಮಣ ದಿಂಡೋರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಲ್ಲದೇ, ಮಹಾದೇವ ಸಾಹುಕಾರ ಭೈರಗೊಂಡ ಅವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ. 

ಈ ಘಟನೆ ರಾಷ್ಟ್ರೀಯ ಹೆದ್ದಾರಿಯ ಕನ್ನಾಳ ಕ್ರಾಸ್ ಬಳಿ ನಡೆದಿದೆ.  ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆದಿದೆ. ಹತ್ಯೆಗೆ ಸಂಚು ರೂಪಿಸಿ 15 ಯುವಕರ ತಂಡ ಸೋಮವಾರ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. 

ಆರೋಪಿಗಳು ಭೈರಗೊಂಡ ಇದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿ, ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಪೆಟ್ರೋಲ್ ಬಾಂಬ್ ಸಹ ಎಸೆದಿದ್ದಾರೆ. ಆದರೆ, ಅದು ಸ್ಫೋಟಗೊಂಡಿಲ್ಲ. ಘಟನೆಯಲ್ಲಿ ಕಾರು ಚಾಲಕ ಮತ್ತು ಭೈರಗೊಂಡ ಅಂಗರಕ್ಷಕ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. 

ದಾಳಿ ಮಾಡಿದ್ದ ತಂಡದಲ್ಲಿ ಇಬ್ಬರಿಗೆ ಗಾಯಗಳಾಗಿವೆ. ವಿಜಯಪುರ, ಮಹಾರಾಷ್ಟ್ರದ ಸೋಲಾಪುರ, ಪುಣೆ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

1,500 ಜನ ಪೊಲೀಸರು ತನಿಖೆಯಲ್ಲಿ ತೊಡಗಿದ್ದು, ವಿಜಯಪುರ ಮತ್ತು ಸೋಲಾಪುರದ ರೌಡಿಗಳ ಪತ್ತೆಗೆ ತಯಾರಿ ನಡೆಸಲಾಗಿದೆ ಎಂದಿದ್ದಾರೆ. 

ವೃತ್ತಿಪರ ಕೊಲೆಗಾರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸದ್ಯ ತನಿಖೆ ಆರಂಭಿಸಲಾಗಿದ್ದು, ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ಯತ್ನ ಇದೊಂದು ಸುಪಾರಿ ಹತ್ಯೆಯ ಯತ್ನವೋ ಅಥವಾ ಬೇರೆ ಉದ್ದೇಶವೋ ಎಂಬುದು ಶೀಘ್ರವೇ ಹೊರಬರಲಿದೆ ಎಂದು ಅವರು ತಿಳಿಸಿದರು.

ಘಟನೆಯಲ್ಲಿ ಭೈರಗೊಂಡ ಸಾಹುಕಾರ ಅವರಿಗೆ ಹೊಟ್ಟೆಯ ಭಾಗದಲ್ಲಿ ಎರಡು ಹಾಗೂ ಬೆನ್ನಿನ ಪಕ್ಕೆಲಬಿಗೆ ಒಂದು ಗುಂಡು ತಗುಲಿತ್ತು. ಸದ್ಯ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎನ್ನಲಾಗಿದೆ.

Exit mobile version