ವರುಣನ ಆರ್ಭಟ – ಸಂತ್ರಸ್ಥರಿಗೆ ಪರಿಹಾರ ಘೋಷಿಸಿದ ಸರ್ಕಾರ!

bhima river

bhima river problem

ಬೆಂಗಳೂರು: ಪ್ರವಾಹ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆರಾಯನ ಅವಾಂತರ ಜೋರಾಗಿದೆ.

ಇದರಿಂದ ಜನರ ಬದುಕು ಬೀದಿಗೆ ಬಂದಿದೆ. ಹಲವರು ಮನೆ – ಮಠಗಳನ್ನು ಕಳೆದುಕೊಂಡಿದ್ದಾರೆ. ದವಸ –ಧಾನ್ಯಗಳು ಇಲ್ಲವಾಗಿದೆ. ಜಾನುವಾರುಗಳನ್ನು ರೈತರು ಕಳೆದುಕೊಂಡಿದ್ದಾರೆ. ಜಮೀನುಗಳಲ್ಲಿ ಬೆಳೆಗಳು ಮಣ್ಣು ಪಾಲಾಗಿವೆ. ಹಲವರಂತೂ ಬಟ್ಟೆ ಬರೆ ಕೂಡ ಇಲ್ಲದ ಸ್ಥಿತಿಗೆ ಬಂದು ನಿಂತಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಜನರಿಗೆ ಪರಿಹಾರ ಘೋಷಿಸಿದೆ. ಸರ್ಕಾರವು ಎಸ್ ಡಿಆರ್ಎಫ್ ಹಾಗೂ ಎನ್ ಡಿಆರ್ ಎಫ್ ಫಂಡ್ ನಲ್ಲಿ ಬಟ್ಟೆ–ಬರೆ ಹಾಗೂ ದಿನಬಳಕೆ ವಸ್ತುಗಳಿಗೆ ಹಣ ಬಿಡುಗಡೆ ಮಾಡಿದೆ. ಮಳೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ರೂ. 3,800 ಪರಿಹಾರದೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ ರೂ. 6,200 ಸೇರಿಸಿ ರೂ. 10 ಸಾವಿರದಂತೆ ಪರಿಹಾರ ಘೋಷಿಸಿದೆ.

ಅಲ್ಲದೇ, ಮಳೆಯಿಂದ ತೀವ್ರವಾಗಿ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಘೋಷಿಸಲಾಗಿದೆ. ಮಳೆಯಿಂದ ಶೇ.75ಕ್ಕಿಂತ ಹೆಚ್ಚು ಹಾಗೂ ಸಂಪೂರ್ಣ ಮನೆ ಹಾನಿಯಾದ ಕುಟುಂಬಗಳಿಗೆ ರೂ. 5 ಲಕ್ಷ, ಶೇ. 25 ರಿಂದ ಶೇ.75ರಷ್ಟು (ಕೆಡವಿ ಹೊಸದಾಗಿ ನಿರ್ಮಿಸಲು) ಹಾನಿಯಾದ ಮನೆಗಳ ನಿರ್ಮಾಣಕ್ಕಾಗಿ ರೂ. 5 ಲಕ್ಷ, ಶೇ.25ರಿಂದ ಶೇ.75ರಷ್ಟು ಭಾಗಶಃ ಮನೆ ಹಾನಿಯಾಗಿದ್ದಕ್ಕೆ ರೂ.3 ಲಕ್ಷ, ಶೇ. 15ರಿಂದ ಶೇ. 25ರಷ್ಟು ಅಲ್ವಸ್ವಲ್ಪ ಮನೆ ಹಾನಿಯಾಗಿದ್ದರೆ ರೂ. 50 ಸಾವಿರ ಪರಿಹಾರ ಘೋಷಿಸಲಾಗಿದೆ.

Exit mobile version