– ನಿಂಗಪ್ಪ ಹಮ್ಮಿಗಿ
ಶಿರಹಟ್ಟಿ: ಕಲ್ಲಿಗೆ ಕಲೆಯ ಸ್ಪರ್ಷ ಸಿಕ್ಕಾಗ ಮಾತ್ರ ಭಾವನೆಗಳೇ ಬದಲಾಗುವ ಶಕ್ತಿ ಅದಕ್ಕೆ ಸಿಗುತ್ತದೆ. ಕಲ್ಲು, ಕಲೆಗಾರನ ತೆಕ್ಕೆಯಲ್ಲಿ ಬಿದ್ದಾಗಲಷ್ಟೇ ಅದಕ್ಕೆ ಹೊಸ ಅವತಾರವೇ ಸಿಗಲಿದೆ. ಇಂತಹ ಅವತಾರ ಪಡೆದ ಕಲ್ಲು ದೇವರಾಗಿ, ಜನರಿಂದ ಪೂಜ್ಯನೀಯ ವಸ್ತುವಾಗುತ್ತದೆ. ಆದರೆ, ಕಲ್ಲಿಗೆ ಮೂರ್ತಿರೂಪ ಕೊಟ್ಟು, ದೇವರನ್ನಾಗಿಸಿ ಅಥವಾ ಇತಿಹಾಸದ ಸಂಸ್ಕೃತಿಯನ್ನೇ ರೂಪಿಸುವ ಕಲೆಗಾರರ ಬದುಕು ಮಾತ್ರ ಇನ್ನೂ ಕತ್ತಲಲ್ಲಿಯೇ ಉಳಿದಿದೆ.

ತಾಲೂಕಿನ ಹೆಬ್ಬಾಳ ಗ್ರಾಮದ ಮಾನಪ್ಪ ಸುತಾರ ಎಂಬ ಕಲೆಗಾರರ ಬದುಕೇ ಇದಕ್ಕೆ ಜ್ವಲಂತ ಸಾಕ್ಷಿ. 75 ವರ್ಷದ ಮಾನಪ್ಪ ತಮ್ಮ ಬದುಕನ್ನೇ ಕಲೆಗಾಗಿ ಸಮರ್ಪಿಸಿದ್ದಾರೆ. ಇವರ ಕುಟುಂಬ ತಲತಲಾಂತರ ವರ್ಷಗಳಿಂದ ಈ ಕಾಯಕದಲ್ಲಿಯೇ ಬದುಕು ಸವೆಸುತ್ತಿದೆ.

ಮಾನಪ್ಪ ಅವರ ಕಲೆಯಲ್ಲಿ ಆಂಜನೇಯ, ಗಣಪತಿ, ಸರಸ್ವತಿ, ಲಕ್ಷ್ಮೀ, ವೀರಭದ್ರ, ಸತ್ಯನಾರಾಯಣ, ಕಾಳಿಕಾದೇವಿ, ಪರಮೇಶ್ವರ, ವಿಠೋಭಾ ರುಖುಮಾಯಿ, ಬಸವಣ್ಣ ಸೇರಿದಂತೆ ದೇಶದಲ್ಲಿ ಪೂಜ್ಯನೀಯ ಸ್ಥಾನಗಳಲ್ಲಿರುವ ಮುಕ್ಕೋಟಿ ದೇವರುಗಳಲ್ಲಿನ ಬಹುತೇಕರು ಜನ್ಮ ತಾಳಿದ್ದಾರೆ.

ಇವರ ಕಲೆಗೆ ಅಂತರ್ ರಾಜ್ಯ, ಜಿಲ್ಲೆಗಳ ಜನರು ಮಾರು ಹೋಗಿ, ತಮ್ಮ ಇಷ್ಟಾರ್ಥ ದೇವರುಗಳನ್ನು ಇವರಿಂದಲೇ ಸೃಷ್ಟಿಸಿಕೊಂಡು ಪಡೆದುಕೊಂಡಿದ್ದಾರೆ. ಹೀಗಾಗಿ ಸದ್ಯ ಇವರ ಮನೆಯ ಅಂಗಳವೇ ಮುಕ್ಕೋಟಿ ದೇವರುಗಳ ಉಗಮ ಸ್ಥಾನದಂತಾಗಿದೆ.

ಕೆತ್ತನೆಯ ಮೂರ್ತಿಗಳಿಗೆ ಬೇಡಿಕೆ
ಇವರು ತಯಾರಿಸುವ ಸೂಕ್ಷ್ಮ ಕೆತ್ತನೆಯ ಮೂರ್ತಿಗಳಿಗೆ ಗೋವಾ, ಮಹಾರಾಷ್ಟ್ರ, ಮಧ್ಯ ಪ್ರದೇಶದಿಂದಲೂ ಬೇಡಿಕೆ ಇದೆ. ಬಳ್ಳಾರಿ, ಹೂವಿನ ಹಡಗಲಿ, ಕೊಪ್ಪಳ, ಗಂಗಾವತಿ, ಹಾವೇರಿ, ಸಿಂಧನೂರು, ಬೆಂಗಳೂರು, ಗುಲ್ಬರ್ಗ ಜಿಲ್ಲೆಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಇವರು ತಯಾರಿಸಿದ ವಿಗ್ರಹಗಳಿಗೆ ಬೇಡಿಕೆ ಇದೆ. ಮಾನಪ್ಪ ಅವರು, ಕರಿ ಮೋಡಿ ಕಲ್ಲಿನಲ್ಲಿ ವಿಗ್ರಹಗಳನ್ನು ತಯಾರಿಸುತ್ತಾರೆ. ಮೈಸೂರಿನ ಹೆಗ್ಗಡದೇವನಕೋಟೆಯಿಂದ ಈ ಕಲ್ಲುಗಳನ್ನು ತರಿಸಿಕೊಳ್ಳುತ್ತಾರೆ.

ಇವರೊಂದಿಗೆ ಸದ್ಯ ಅವರ ಹಿರಿಯ ಮಗ ಶಶಿಧರ ಕೂಡ ಕೈ ಜೋಡಿಸಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೋಮಾ ಮುಗಿಸಿ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದರೂ ಮರಳಿ ಬಂದು ತಂದೆಯ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಷ್ಟೆ ಅಲ್ಲದೇ, ಮಾನಪ್ಪ ಅವರ ಕಿರಿಯ ಮಕ್ಕಳಾದ ಚಂದ್ರಶೇಖರ್, ಪ್ರಮೋದ್ ಹಾಗೂ ಅವರ ಅಳಿಯ ನಾರಾಯಣ್ ಕೂಡ ಇದೇ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಜನರು ಹುಬ್ಬೇರಿಸುವ ಕಾರ್ಯ
ಸಾಂಪ್ರದಾಯಿಕ ಉಪಕರಣಗಳನ್ನು ಬಳಕೆ ಮಾಡಿಕೊಂಡು ಕೆತ್ತನೆಯ ಕಾರ್ಯದಲ್ಲಿ ಈ ಕುಟುಂಬ ಕಾರ್ಯನಿರತವಾಗಿದೆ. ಕಟ್ಟಿಗೆಯಲ್ಲಿ ಕೂಡ ಕೆತ್ತನೆ ಮಾಡಿ ಜನರು ಹುಬ್ಬೇರಿಸುವಂತೆ ಮಾಡಿದ್ದಾರೆ. ಇದರೊಂದಿಗೆ ಬಣ್ಣದ ಮೂಲಕ ದೇವರಿಗೆ ವಿವಿಧ ರೂಪ ನೀಡುತ್ತಾರೆ.

ಇದು ನಮ್ಮ ಕುಲ ಕಸುಬು ಇದು ನಮ್ಮ ಕುಲ ಕಸುಬು. ಕಲೆ ನಶಿಸಬಾರದು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿದ್ದ ಉಪನ್ಯಾಸಕ ಹುದ್ದೆ ಬಿಟ್ಟು ಗ್ರಾಮಕ್ಕೆ ಬಂದು ನಿತ್ಯ ಶಿಲ್ಪಕಲಾ ಸೇವೆಯಲ್ಲಿ ತೊಡಗಿದ್ದೇನೆ. ಈ ಉದೋಗದಲ್ಲಿ ಸಂಪೂರ್ಣ ತೃಪ್ತಿಯಿದ್ದು, ಜೀವನ ನಿರ್ವಹಣೆಗೆ ತೊಂದರೆಯಿಲ್ಲ. ನಾವು ಯಾವುದೇ ಪ್ರಶಸ್ತಿ, ಸನ್ಮಾನಕ್ಕಾಗಿ ಈ ವೃತ್ತಿಯಲ್ಲಿ ಮುಂದುವರೆಸಿಲ್ಲ. ಶಶಿಧರ ಸುತಾರ, ಶಿಲ್ಪಕಲಾಕಾರ ಹೆಬ್ಬಾಳ.

ಮೂರು ತಲೆಮಾರುಗಳಿಂದ ಈ ವೃತ್ತಿಯನ್ನೇ ಬದುಕಾಗಿಸಿಕೊಂಡ ಈ ಕುಟುಂಬಕ್ಕೆ ಸರ್ಕಾರದ ಗೌರವಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಕೊನೆಯ ಪಕ್ಷ ಅವರಿಗೆ ಮಾಸಾಶನ ಕೂಡ ಸಿಗುತ್ತಿಲ್ಲ. ಹೀಗಾಗಿ ಈ ಭಾಗದ ಜನರು ಹಾಗೂ ಇವರ ಕಲೆ ಮೆಚ್ಚಿಕೊಂಡವರು, ಸರ್ಕಾರ ಇಂತಹ ಕಲಾವಿದರನ್ನು ಗುರುತಿಸಿ ಪೋಷಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ಇರುವುದು ಹೆಮ್ಮೆ ಈ ಮನೆತನದವರು ಸಂಪ್ರದಾಯಸ್ಥವಾಗಿ ಈ ಕೆತ್ತನೆಯ ಕಲೆಯಲ್ಲಿ ತೊಡಗಿದ್ದಾರೆ. ಇವರು ತಯಾರಿಸಿದ ವಿಗ್ರಹಳು ದೇಶದ ವಿವಿಧ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆಯಾಗಿವೆ. ಇಂತಹ ಅದ್ಭುತ ಕಲಾ ಆರಾಧರಕರು ನಮ್ಮ ಗ್ರಾಮದಲ್ಲಿ ಇರುವುದು ಹೆಮ್ಮೆಯ ವಿಚಾರ. ಎಂ.ಎ. ಪಾಟೀಲ, ಸ್ಥಳೀಯರು.

ಆರ್ಥಿಕ ಸಂಕಷ್ಟ
ಕಲೆಯನ್ನೇ ನೆಚ್ಚಿಕೊಂಡು ಕುಳಿತಿರುವ ಈ ಕುಟುಂಬ ಸದ್ಯ ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಮೂರ್ತಿಗಳನ್ನು ಕೊಳ್ಳುವವರು ಸದ್ಯ ಇಲ್ಲದಂತಾಗಿದೆ. ಅಲ್ಲದೇ, ತಯಾರಾಗಿದ್ದ ವಿಗ್ರಹಗಳನ್ನು ಕೂಡ ಯಾರೂ ತೆಗೆದುಕೊಂಡು ಹೋಗುತ್ತಿಲ್ಲ. ಇದರೊಂದಿಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಕೂಡ ಇವರ ಬದುಕನ್ನು ಕಿತ್ತು ತಿನ್ನುತ್ತಿದೆ. ಭಾರತೀಯ ಸಂಸ್ಕೃತಿಯನ್ನೇ ಎತ್ತಿ ಹಿಡಿಯುತ್ತಿರುವ ಈ ಕಲಾವಿದರ ಕುಟುಂಬದತ್ತ ಇನ್ನಾದರೂ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಬೇಕು ಎಂಬುವುದು ಪ್ರಜ್ಞಾವಂತರು ಒತ್ತಾಯವಾಗಿದೆ.



Leave a Reply

Your email address will not be published. Required fields are marked *

You May Also Like

ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಕಣ್ಣು, ಹೃದಯ ಇಲ್ಲ : ಡಿಕೆಶಿ ಕಿಡಿ

ಧಾರವಾಡ : ರಾಜ್ಯ ಬಿಜೆಪಿ ಸರ್ಕಾರ ನೀಡಿದ ಪರಿಹಾರ ಇಲ್ಲಿಯವರೆಗೂ ರೈತರಿಗೆ ಸಿಕ್ಕೇಯಿಲ್ಲ ,ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡೂ ಗಂಟೆ ಅವಕಾಶ ನೀಡುವ ಈ ಸರ್ಕಾರ ,ಆದರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡಿದೆ. ಈ ಸರ್ಕಾರಕ್ಕೆ ನಿಮಗೆ ಕಣ್ಣು,ಹೃದಯ ಎಂಬುದು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಿಡಿ ಕಾರಿದರು .

ರಾಜ್ಯದಲ್ಲಿ ಕೊರೋನಾ ಸೋಂಕು ಹರಡಿದ್ದು ಎಷ್ಟು ಜನರಿಂದ ಗೊತ್ತಾ?

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿಲಿದ್ದು ಸೋಂಕಿತರ ಸಂಖ್ಯೆ 700 ಗಡಿ ದಾಟಿದೆ. ಆದರೆ ಇಷ್ಟೊಂದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಎಷ್ಟು ಜನ ಕಾರಣ ಻ನ್ನೋದು ಮಾತ್ರ ಕುತೂಹಲ.

ತಾಲೂಕಾಸ್ಪತ್ರೆಗೆ ಜಿಲ್ಲಾಧಿಕಾರಿ ಸುಂದರೇಶ ಬಾಬು ಭೇಟಿ

ಜಿಲ್ಲಾ‌ ವರಿಷ್ಠಾಧಿಕಾರಿ ಯತೀಶ್ ಎನ್, ತಹಸೀಲ್ದಾರ್ ಜೆ.ಬಿ.ಜಕ್ಕನಗೌಡ, ಹೊಳೆ ಆಲೂರ ಕಂದಾಯ ನಿರೀಕ್ಷಕ ರವಿ ಬಾರಕೇರ, ಸಿಡಿಪಿಒ ಬಿ.ಎಂ.ಮಾಳೇಕೊಪ್ಪ, ಭೀಮಸೇನ್ ಜೋಶಿ ಆಸ್ಪತ್ರೆಯ ವೈದ್ಯಾಧಿಕಾರಿ ಎಚ್.ಎಲ್.ಗಿರಡ್ಡಿ, ಸಿಪಿಐ ಸುನೀಲ್ ಸವದಿ, ಪಿಎಸ್ ಐ ವಿನೋದ ಪೂಜಾರಿ ಮುಂತಾದವರಿದ್ದರು.

ದೋತರಾ ಹರಿದು ಮಾಸ್ಕ್ ಮಾಡಿನಿ: ಎಸ್.ಎಸ್.ಪಾಟೀಲ್

ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್