ಕೊರೊನಾಕ್ಕೆ ಅಕ್ಷರಸಃ ನಲುಗುತ್ತಿದೆ ಬೆಂಗಳೂರು!

ನವದೆಹಲಿ : ಬೆಂಗಳೂರು ನಗರದಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿಗರಲ್ಲಿ ಆತಂಕ ಮನೆ ಮಾಡುತ್ತಿದೆ.


ಸದ್ಯ ಬೆಂಗಳೂರು ನಗರವೊಂದರಲ್ಲಿಯೇ ಪ್ರತಿ ದಿನ 4 ಸಾವಿರದಿಂದ 5 ಸಾವಿರದಷ್ಟು ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿವೆ. ಅಷ್ಟೆ ಅಲ್ಲದೇ, ಸತತ ಮೂರು ದಿನಗಳಿಂದ 5 ಸಾವಿರಕ್ಕೂ ಅಧಿಕ ಕೇಸ್ ಗಳು ಸಿಗುತ್ತಿವೆ. ಹೀಗಾಗಿ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಶ್ವದಲ್ಲಿ ಸೋಂಕಿನ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಸದ್ಯ ಸೋಂಕಿತರ ಸಂಖ್ಯೆ 71 ಲಕ್ಷದ ಗಡಿ ದಾಟಿದೆ. ಇಲ್ಲಿಯವರೆಗೂ ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದ ದೆಹಲಿ, ಪುಣೆ, ಥಾಣೆಯಂತಹ ನಗರಗಳಲ್ಲಿ ಸದ್ಯದ ಮಟ್ಟಿಗೆ ಹತೋಟಿಗೆ ಬರುತ್ತಿದೆ. ಆದರೆ, ಮುಂಬಯಿ, ಕೋಲ್ಕತ್ತಾಗಳಲ್ಲಿ ಇದರ ಅಟ್ಟಹಾಸ ಹೆಚ್ಚಾಗುತ್ತಿದೆ.

ಪುಣೆ ಮೊದಲಿನ ಸ್ಥಾನದಲ್ಲಿದ್ದು, ಬೆಂಗಳೂರು ಮೂರನೇ ಸ್ಥಾನಕ್ಕೆ ಜಿಗಿದಿದೆ. ಪುಣೆ ನಗರದಲ್ಲಿ 3.14 ಲಕ್ಷದಷ್ಟು ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಪುಣೆಗಿಂತಲೂ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಿದೆ. ಇದುವರೆಗೆ ನಗರದಲ್ಲಿ 3,320 ಜನ ಸಾವನ್ನಪ್ಪಿದ್ದಾರೆ. ಕಳೆದ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿ 39 ಜನ ಸಾವನ್ನಪ್ಪಿದ್ದರೆ, ಮುಂಬಯಿನಲ್ಲಿ ಈ ಸರಾಸರಿ 47ರಷ್ಟಿದೆ.

ಮುಂಬಯಿನಲ್ಲಿ ಏಪ್ರಿಲ್ – ಮೇ ತಿಂಗಳಿನಿಂದ ಸತತ ಏರಿಕೆ ಕಾಣುತ್ತಿದೆ. ಸದ್ಯ ಅಲ್ಲಿ 2,27,276 ಸೋಂಕಿನ ಪ್ರಕರಣಗಳು ಇವೆ. ಪ್ರತಿದಿನ ಸರಾಸರಿ 2,800 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಿನ ಜನಸಾಂದ್ರತೆಯಿರುವ ದೆಹಲಿ, ಪುಣೆ ಮತ್ತು ಥಾಣೆ ನಗರಗಳಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ಬೆಂಗಳೂರು, ಮುಂಬಯಿ ಹಾಗೂ ಕೋಲ್ಕತ್ತಾಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

Exit mobile version