ಶಾಲೆಗಳನ್ನು ತೆರೆಯುವಂತೆ ಮಕ್ಕಳ ಆಯೋಗ ಮನವಿ ಮಾಡಿದ್ದೇಕೆ?

ಬೆಂಗಳೂರು : ಶಾಲೆಗಳು ಕೂಡಲೇ ಆರಂಭವಾಗದಿದ್ದರೆ ಬಾಲ ಕಾರ್ಮಿಕತೆ, ಮಕ್ಕಳ ಸಾಗಾಟ ಮತ್ತು ಬಾಲ್ಯ ವಿವಾಹದಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಕ್ಕಳ ಆಯೋಗ ಕಳವಳ ವ್ಯಕ್ತಪಡಿಸಿದೆ.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಶಾಲೆ ತೆರೆಯುವಂತೆ ಪತ್ರ ಬರೆದಿದೆ. ಅಲ್ಲದೇ, ಈ ಕೂಡಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ. ಅಷ್ಟೇ ಅಲ್ಲದೇ, ಈ ಶೈಕ್ಷಣಿಕ ವರ್ಷವನ್ನು ಪರೀಕ್ಷಾ ರಹಿತ ವರ್ಷವೆಂದು ಘೋಷಿಸಿ ಮಾರ್ಗಸೂಚಿ ರಚಿಸಬೇಕೆಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ರಾಜ್ಯ ಸರ್ಕಾರವೂ ಸೂಕ್ತ ಮಾರ್ಗಸೂಚಿಗಳನ್ನು ತೆಗೆದುಕೊಂಡು ಶಾಲೆಗಳಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಬೇಕು. 15 ದಿನಗಳವರೆಗೆ ಅರ್ಧ ದಿನ ಮಾತ್ರ ಶಾಲೆಗಳನ್ನು ತೆರೆಯಬೇಕು. 30ಕ್ಕಿಂತ ಕಡಿಮೆ ಮಕ್ಕಳು ಹಾಜರಾಗುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿರುವ ತರಗತಿಗಳಲ್ಲಿ ಹಂತ ಹಂತವಾಗಿ ಶಾಲೆಗಳನ್ನು ತೆರೆಯಬೇಕು. ಶುಚಿತ್ವಕ್ಕ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಕೊರೊನಾ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಇದರೊಂದಿಗೆ ಪಾಲಕರಿಗೆ ಈ ಕುರಿತು ತಿಳಿ ಹೇಳಬೇಕು ಎಂದು ಆಯೋಗ ಹೇಳಿದೆ.

11 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಶಿಕ್ಷಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸಬೇಕು. ಶಾಲೆಗಳಲ್ಲಿ ಕೈ ತೊಳೆಯುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲಾ ಮಕ್ಕಳಿಗೆ ಪ್ರತ್ಯೇಕ ಶಿಷ್ಟಾಚಾರವನ್ನು ಹೊರಡಿಸಬೇಕು ಎಂದು ಅದು ಹೇಳಿದೆ.

Exit mobile version