ಸಿಬಿಐನ ಮಾಜಿ ನಿರ್ದೇಶಕ ನೇಣಿಗೆ ಶರಣು!

ಚಂಡೀಗಢ : ಸಿಬಿಐನ ಮಾಜಿ ನಿರ್ದೇಶಕ, ನಾಗಲ್ಯಾಂಡ್ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಮ್ಲಾದ ಅವರ ನಿವಾಸದಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಅಶ್ವನಿ ಅವರ ಶವ ಪತ್ತೆಯಾಗಿದೆ.

ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಡೆತ್ ನೋಟ್ ನಲ್ಲಿ ಜೀವನದಲ್ಲಿ ತುಂಬಾ ಬೇಸರಗೊಂಡಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಶ್ವನಿ ಬರೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯಲ್ಲಿರುವ ದೇವರ ಕೋಣೆಯಲ್ಲಿ ಅಶ್ವನಿ ಶವ ಪತ್ತೆಯಾಗಿದೆ. ಅವರ ಪತ್ನಿ, ಮಗ ಹಾಗೂ ಮಗಳು ಮನೆಯ ಕೆಳ ಮಹಡಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ಶಿಮ್ಲಾ ಮೋಹಿತ್, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ನಿಖರ ಕಾರಣ ತಿಳಿಯಬಹುದಾಗಿದೆ ಎಂದು ಹೇಳಿದ್ದಾರೆ.

ಅಶ್ವನಿ ಅವರು ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ಸಂಜೆ ವಾಕಿಂಗ್ ಹೋಗಿ ಬಂದಿದ್ದ ಅಶ್ವನಿ ಅವರು ಪ್ರಾರ್ಥನೆ ಸಲ್ಲಿಸಲೆಂದು ದೇವರ ಕೋಣೆಗೆ ಹೋಗಿದ್ದರು.

ಹೀಗೆ ಹೋದವರು ಕೆಲ ಸಮಯವಾದರೂ ವಾಪಸ್ ಬರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ದೇವರ ಕೋಣೆಗೆ ಹೋಗಿ ನೋಡಿದಾಗ ಅಶ್ವನಿ ಅವರ ಶವ ಪತ್ತೆಯಾಗಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

Exit mobile version