ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

taluq hospital laksmeshwar

ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

ಲಕ್ಷ್ಮೇಶ್ವರ: ರೋಗಿಗಳ ಪಾಲಿಗೆ ಆಸ್ಪತ್ರೆಗಳೇ ಸಂಜೀವಿನಿ ಅಂತಾರೆ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳಂತೂ ಬಡರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ. ಇದರಿಂದ ದಯವಿಟ್ಟು ಮೂಗು ಮುಚ್ಚಿಕೊಂಡು ಒಳ ಬನ್ನಿ ಎಂದು ಅಣಕಿಸುವಂತಿದೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯ ಪರಿಸರ.

ಚಿಕಿತ್ಸೆ ಪಡೆದು ಗುಣಮುಖರಾಗಲು ಆಸ್ಪತ್ರೆಗಳಿಗೆ ರೋಗಿಗಳು ಹೋಗುವುದು ಸಾಮಾನ್ಯ. ಆದರೆ ಇಲ್ಲಿ ಕೊಂಚ ಭಿನ್ನ. ಚಿಕಿತ್ಸೆಗೆ ಹೋದ ರೋಗಿಗಳು ಇಲ್ಲಿನ ಅವ್ಯವಸ್ಥೆಯಿಂದ ಮತ್ತಷ್ಟು ಬಳಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷ್ಮೇಶ್ವರ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿತು. ಆದರೆ ತಾಲೂಕು ಕೇಂದ್ರದಲ್ಲಿ ತಾಲೂಕು ಆಸ್ಪತ್ರೆಗೆ ಇರಬೇಕಾದ ಕನಿಷ್ಟ ಸೌಲಭ್ಯಗಳು ಈ ಆಸ್ಪತ್ರೆಗೆ ಇಲ್ಲ. ಇನ್ನು ಈಗಾಗಲೇ ಈ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದಾಗ ಮಾತ್ರ ದು 100 ಹಾಸಿಗೆ ಆಸ್ಪತ್ರೆ ಆಗಲಿದೆ. ಆದರೆ ಅಲ್ಲಿಯವರೆಗೂ ಇರುವ ಆಸ್ಪತ್ರೆಯನ್ನಾದರೂ ಶುಚಿತ್ವ ಕಾಯ್ದುಕೊಂಡು ರೋಗಿಗಳ ಪಾಲಿಗೆ ಸಂಜೀವಿನಿ ಆಗಬೇಕಿದೆ. ಆದರೆ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎನ್ನುವುದು ಸ್ಥಳೀಯರ ಆರೋಪ.

ಸಿಬ್ಬಂಧಿಗಳ ಕೊರತೆ

ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಒಂದೆಡೆ ಶುಚಿತ್ವದ ಕೊರತೆಯಾದರೆ ಮತ್ತೊಂದೆಡೆ ಸಿಬ್ಬಂಧಿ ಕೊರತೆಯೂ ಕಾಡುತ್ತಿದೆ. ಇದರಿಂದ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಎನ್.ಆರ್.ಸಿ.ಎಚ್ ಸಿಬ್ಬಂಧಿಗಳ ಕೊರತೆ ಎದ್ದು ಕಾಣುತ್ತಿದೆ.

ಆರೋಗ್ಯ ಕೇಂದ್ರವೂ ಅವ್ಯವಸ್ಥೆಯ ಆಗರವಾಗಿದೆ‌. ಆಸ್ಪತ್ರೆಯ ಶೌಚಾಲಯ ಹಾಗೂ ಮೂತ್ರಾಲಯ ಗಬ್ಬುನಾರುತ್ತಿದೆ. ಎಲ್ಲೆಂದರಲ್ಲಿ ಗುಟ್ಕಾ ಚೀಟಗಳು ಕಾಣುತ್ತಿವೆ. ಇದರಿಂದ ರೋಗಿಗಳು ಮೂಗು ಮುಚ್ಚಿಕೊಂಡೆ ಆಸ್ಪತ್ರೆ ಶೌಚಾಲಯಕ್ಕೆ ಹೋಗುವಂತಾಗಿದೆ.  

ಕೊರೊನಾದ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೋಗಿಗಳ ಪಾಡಂತೂ ಹೇಳತೀರದು. ಈಗಾಗಲೇ ಇದು 30 ಬೆಡ್ ಆಸ್ಪತ್ರೆಯಾಗಿದೆ. ಒಂದು ಬೆಡ್ ನಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಬೇಕಾಗಿ ಸ್ಥಿತಿ ಎದುರಾಗಿದೆ. ಸರಿಯಾದ ಬೆಡ್ ವ್ಯವಸ್ಥೆಯಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಸಿಬ್ಬಂಧಿಗಳ ಕೊರತೆಯಿಂದಾಗಿ ಚಿಕಿತ್ಸೆಗೆ ಬಂದ ರೋಗಿಗಳಂತೂ ಘಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಶರಣು ಗೋಡಿ, ಕನ್ನಡಪರ ಸಂಘಟನೆ ಮುಖಂಡ
 

ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಿ

ಕೂಡಲೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಬೇಕಿದೆ. ಈಗಾಗಲೇ ಹಲವಾರು ಗ್ರಾಮಗಳ ರೋಗಿಗಳು ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಈ ಆಸ್ಪತ್ರೆಯನ್ನೇ ನಂಬಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶುಚಿತ್ವದ ಕೊರತೆಯಿಂದ ರೋಗಿಗಳಿಗೆ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಶುಚಿತ್ವದ ನಿರ್ವಹಣೆ ಪಡೆದವರಿಗೆ ಈ ಬಗ್ಗೆ ಸೂಚನೆ ಕೊಡಬೇಕು. ಜೊತೆಗೆ ಅವರ ಮೇಲೆ ಇಲಾಖೆ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಶರಣು ಗೋಡಿ, ಕನ್ನಡಪರ ಸಂಘಟನೆ ಮುಖಂಡ

ಜಾಕೀರ್ ಹುಸೇನ್ ಹವಾಲ್ದಾರ್, ಸ್ಥಳೀಯರು.

ಸೂಕ್ತ ಚಿಕಿತ್ಸೆ ಬೇಕಿದೆ ಸರ್ಕಾರಿ ಆಸ್ಪತ್ರೆಗೆ ಕೂಡಲೇ ಆರೋಗ್ಯ ಇಲಾಖೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಬೇಕಿದೆ. ಬೆಡ್ ಹಾಗೂ ಸಿಬ್ಬಂಧಿಗಳ ಸಮಸ್ಯೆಯಿಂದ ನಿತ್ಯ ನೂರಾರು ರೋಗಿಗಳು ಪರದಾಡುವಂತಾಗಿದೆ. ಹೀಗಾಗಿ ಕೂಡಲೇ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಇಲಾಖೆ ಮುಂದಾಗಬೇಕಿದೆ. ಜಾಕೀರ್ ಹುಸೇನ್ ಹವಾಲ್ದಾರ್, ಸ್ಥಳೀಯರು.

ಲಕ್ಷ್ಮೇಶ್ವರ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ತಾಲೂಕಿನಲ್ಲಿ ಇರಬೇಕಾದ ಆಸ್ಪತ್ರೆಯ ಸೌಲಭ್ಯಗಳನ್ನು ಇಲಾಖೆ ನೀಡುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಿಬ್ಬಂಧಿಗಳ ಕೊರತೆಯಿಂದ ಆಗುತ್ತಿರುವ ಅವ್ಯವಸ್ಥೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ವೈದ್ಯಾಧಿಕಾರಿ ಡಾ.ಗಿರೀಶ ಮರಡ್ಡಿ ತಿಳಿಸಿದರು.

ಆದರೆ ಈ ಬಗ್ಗೆ ಸ್ಥಳೀಯ ಶಾಸಕ ರಾಮಣ್ಣ ಲಮಾಣಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಕಾಳಜಿ ವಹಿಸಬೇಕಿದೆ. ಸರ್ಕಾರಿ ಆಸ್ಪತ್ರೆಯಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಒದಗಿಸಿಕೊಡಬೇಕಿದೆ.

Exit mobile version