ಅಸಾಧ್ಯ ಎಂಬುವುದು ಯಾವುದೂ ಇಲ್ಲ..! ಪಂಜಾಬ್ – ರಾಜಸ್ಥಾನ್ ಮ್ಯಾಚ್ ನೋಡಿದವರಿಗೆ ಹೀಗೆ ಅನಿಸಲೇಬೇಕು!

ಶಾರ್ಜಾ : ಕ್ರಿಕೆಟ್ ಅಂಗಳದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಕ್ಕಿವೆ. ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ 400ಕ್ಕೂ ಅಧಿಕ ರನ್ ಟಾರ್ಗೆಟ್ ನೀಡಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ದಕ್ಷಿಣ ಆಫ್ರಿಕಾ ಗೆದ್ದಂತೆ ಇಲ್ಲಿ ಪಂಜಾಬ್ ನ್ನು ಮಣಿಸಿ ರಾಜಸ್ಥಾನ್ ಗೆದ್ದು ಬೀಗಿದೆ.

ಕೊನೆಯ 4 ಓವರ್ ಗಳಲ್ಲಿ ತಂಡದ ಗೆಲುವಿಗೆ 80ಕ್ಕೂ ಅಧಿಕ ರನ್ ಗಳು ಬೇಕಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದು, ಇದೇನು ಅಸಾಧ್ಯವಾಗುವ ಕೆಲಸವಲ್ಲ ಎಂದು ಕ್ರಿಕೆಟ್ ಅಂಗಳದಲ್ಲಿ ತೋರಿಸಿ ಕೊಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ತಂಡ ಮಯಾಂಕ್‌ ಅಗರ್ವಾಲ್ (106) ಅವರ ಶತಕ ಹಾಗೂ ನಾಯಕ ಕೆ.ಎಲ್. ರಾಹುಲ್ ಅವರ ಅರ್ಧ ಶತಕದ ನೆರವಿನಿಂದ 2 ವಿಕೆಟ್‌ಗೆ 223 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ 19.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 226 ರನ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದೆ. 

ಈ ಪಂದ್ಯ 449 ರನ್‌ ಗಳಿಗೆ ಸಾಕ್ಷಿಯಾಯಿತು. ಅಲ್ಲದೇ, ಬರೋಬ್ಬರಿ 29 ಸಿಕ್ಸರ್‌ ಗಳು ಮೂಡಿ ಬಂದವು. ಪಂಜಾಬ್ ತಂಡ 11 ಸಿಕ್ಸರ್‌ ಬಾರಿಸಿದರೆ, ರಾಯಲ್ಸ್‌ ತಂಡ ಬರೋಬ್ಬರಿ 18 ಸಿಕ್ಸರ್‌ ಗಳನ್ನು ಚೆಚ್ಚಿದೆ. ಅದರಲ್ಲಿಯೂ ರಾಜಸ್ಥಾನ್ ತಂಡ ಕೊನೆಯ 13 ಎಸೆತಗಳಲ್ಲಿ 7 ಸಿಕ್ಸರ್‌ ಸಿಡಿಸಿ ಪಂಜಾಬ್‌ ನ ಕೈಯಲ್ಲಿದ್ದ ಪಂದ್ಯವನ್ನು ಕಸಿದುಕೊಂಡಿದೆ. 18ನೇ ಓವರ್‌ ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ರಾಹುಲ್‌ ತೆವಾಟಿಯಾ, ಎಡಗೈ ವೇಗಿ ಶೆಲ್ಡನ್‌ ಕಾಟ್ರೆಲ್‌ ಅವರ ಬೌಲಿಂಗ್‌ ನಲ್ಲಿ ಸತತ 6 ಎಸೆತಗಳಲ್ಲಿ 5 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು.

Exit mobile version