ಮುಳಗುಂದ: ಸಮೀಪದ ಹೊಸೂರ ಗ್ರಾಮದ ದೇಶಪಾಂಡೆ ವಾಡೆಯ ಸುತ್ತಮುತ್ತಲಿನ ನೂರಾರು ಮನೆಗಳ ಅಡಿಪಾಯ, ಅಂಗಳದಲ್ಲಿ ಅತಿವೃಷ್ಟಿಯಿಂದ ಅಂತರ್ಜಲ ಹೆಚ್ಚಾಗಿ ನೀರು ಉಕ್ಕಿಹರಿಯುತ್ತಿದೆ.
ಗ್ರಾಮದ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿಂದ ಸತತ ಮಳೆಯ ಪರಿಣಾಮ ಕೆರೆ, ಬಾವಿ ತುಂಬಿಕೊಂಡು ಅಂತರ್ಜಲ ಹೆಚ್ಚಾಳವಾಗಿದೆ. ಗ್ರಾಮದ ವಾಡೆಯ ಹತ್ತಿರದ ಸುಮಾರು 100ಕ್ಕೂಹೆಚ್ಚು ಮನೆಗಳು, ದೇವಸ್ಥಾನ, ಗರಡಿ ಮನೆ ಸೇರಿದಂತೆ ದನದ ಕೊಟ್ಟಿಗೆಯಲ್ಲೂ ನೀರಿನ ಸೆಲೆಗಳು ಕಾಣಿಸುತ್ತಿವೆ.
ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು ಆದರೂ ಈ ಪರಿ ನೀರು ಸೆಲೆಯಾಗಿ ಹರಿದಿರಲಿಲ್ಲ, ಆದರೆ ಇ ವರ್ಷ ಓಣಿಯ ತುಂಬೆಲ್ಲ ನೀರಿನ ಸೆಲೆಗಳು ಹುಟ್ಟಿಕೊಂಡಿದ್ದು ಆತಂಕ ಮೂಡಿಸಿದೆ. ಉದ್ಘಾಟನೆಗೆ ಸಿದ್ದವಾಗಿದ್ದ ಗರಡಿ ಮನೆಯಲ್ಲಿ ನೀರು ತುಂಬಿಕೊಂಡಿದೆ.
ಗ್ರಾಮದ ಶರಣಪ್ಪ ತಳವಾರ ಅವರ ದನದ ಕೊಟ್ಟಿಗೆ ತುಂಬಾ ನೀರು ಸಂಗ್ರವಾಗಿದ್ದು ದನಕರುಗಳ ಕಟ್ಟಲು ಜಾಗವಿಲ್ಲದಂತಾಗಿದೆ. ಗ್ರಾಮದಲ್ಲಿರುವ ಬಾವಿಗಳು ನೆಲಮಟ್ಟದ ವರಗೆಗೂ ಭರ್ತಿಯಾಗಿದ್ದು ನೀರಿನ ಗುಣದರ್ಮ ಸಮತಟ್ಟು ಕಾಯ್ದುಕೊಳ್ಳುತ್ತಿದೆ. ಎಲ್ಲಿ ನೋಡಿದರೂ ತೇವದ ಜಾಗವೇ ಕಾಣಸಿಗುತ್ತಿದೆ. ಹೆಚ್ಚಾದ ಸೆಲೆಯಾಗಿ ಹೊರ ಹೊಮ್ಮುತ್ತಿದೆ.
ಸತತವಾಗಿ ನೀರು ಹರಿಯುತ್ತಿರುವುದರಿಂದ ಮನೆಗಳ ಅಕ್ಕಪಕ್ಕದ ತೆಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಮಲೀನವಾಗುತ್ತಿದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ. ಒಂದೆಡೆ ಸೊಳ್ಳೆಗಳ ಕಾಟವಾದರೆ, ಇನ್ನೊಂದೆಡೆ ಸದಾ ತೇವದಿಂದ ಸಾಂಕ್ರಾಮಿಕ ರೋಗಗಳು ಒಕ್ಕರಿಸು ಆತಂಕ ಇಲ್ಲಿನ ಜನರನ್ನ ಕಾಡುತ್ತಿದೆ.
ಲಾಕ್‍ಡೌನ್ ವೇಳೆ ನಷ್ಟದ ಪರಿಹಾರ ಇನ್ನೂ ಬಂದಿಲ್ಲ ಅಷ್ಟರಲ್ಲಾಗಲೇ ಅತಿವೃಷ್ಟಿ ಎದುರಾಗಿದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರಮೇಶ ಬಶೆಟ್ಟಿ ಅಳಲು ತೊಡಿಕೊಂಡರು.
50 ಎಕರೆ ಬೆಳೆ ನಾಶ
ಗ್ರಾಮದ ಪಕ್ಕದಲ್ಲಿರುವ ಸುಮಾರು 50 ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳಿದಿದ್ದ ತೋಟಗಾರಿಕೆ ಬೆಳೆಗಳು ಅಂತರ್ಜಲ ಹೆಚ್ಚಳದಿಂದ ನೀರಲ್ಲೇ ನಿಂತಿವೆ. ಭೂಮಿ ಸವಳಗಟ್ಟಿದ್ದು ಸೇವಂತಿ, ಸೂರ್ಯಕಾಂತಿ, ಶೇಂಗಾ ಹಾಗೂ ತರಕಾರಿ ಬೆಳೆಗಳಿಗೆ ಕೊಳೆ ರೋಗ ಬಾಧಿಸುತ್ತಿದೆ. ತೋಟಗಾರಿಕೆ ಬೆಳಗಾರರು ಲಾಕ್‍ಡೌನ್ ನಂತರ ಆರ್ಥಿಕ ಚೇತರಿಕೆ ಕಾಣುವ ಮುನ್ನವೇ ಮತ್ತೇ ಬೆಳೆ ನಷ್ಟ ಅನುಭವಿಸುವಂತಾಗಿದೆ.
ಕೊರೊನಾ ಭೀತಿ ಮದ್ಯ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮದ ಜನರಿಗೆ ಸರ್ಕಾರ ಸ್ಪಂದಿಸಬೇಕು. ಮತ್ತು ಅಂತರ್ಜಲ ದಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡಬೇಕು ಎನ್ನುವದು ಗ್ರಾಮಸ್ಥರ ಆಗ್ರಹವಾಗಿದೆ.
