ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್!

ಹುಬ್ಬಳ್ಳಿ: ಲಾಕ್‌ಡೌನ್‌ ತೆರವಾದ ನಂತರ, ಬಸ್ ಸಂಚಾರ ಆರಂಭಗೊಂಡಿದ್ದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಂತೆ ಹೆಚ್ಚುತ್ತಿಲ್ಲ. ಅದಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರನ್ನು ಸೆಳೆಯಲು, ದೈನಂದಿನ ಹಾಗೂ ಮಾಸಿಕ ಪಾಸ್‌ಗಳನ್ನು ರಿಯಾಯಿತಿ ದರದಲ್ಲಿ ನೀಡುವ ಯೋಜನೆ ಹಮ್ಮಿಕೊಂಡಿದೆ.

ಲಾಕ್‌ಡೌನ್ ತೆರವಾದ ಆರಂಭದ ಕೆಲ ತಿಂಗಳ ಕಾಲ ಪಾಸ್ ನೀಡಿರಲಿಲ್ಲ. ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ , ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪಾಸ್ ನೀಡಿ ನಷ್ಟ ಕಡಿಮೆ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ. ಈಗ ಸಧ್ಯ
ಪಾಸ್‌ಗಳನ್ನು ಪಡೆದರೆ ಪ್ರಯಾಣಿಕರಿಗೆ ಹಣ ಉಳಿತಾಯ ವಾಗುತ್ತದೆ. ಪಟ್ಟಣಕ್ಕೆ ಹೋಗಿಬರುವ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ನಿಂದ ಹೆಚ್ಚಿನ ಲಾಭ ಸಿಗುತ್ತದೆ ಎನ್ನುವುದು ಅಧಿಕಾರಿಗಳ ಲೆಕ್ಕಚಾರ.

ಈಗಾಗಲೇ ಕೊರೊನಾ ಹಿನ್ನೆಲೆ ಪ್ರಯಾಣಿಕರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಂಸ್ಥೆ ಸಾಕಷ್ಟು ಹಾನಿ ಅನುಭವಿಸುವಂತಾಗಿತ್ತು. ಈ ಕಾರಣದಿಂದಾಗಿ ಪ್ರಯಾಣಿಕರನ್ನು ಸೆಳೆಯುವ ಜೊತೆಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟದ ಪ್ರಮಾಣವನ್ನು ಇಳಿಕೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ನಿತ್ಯ ಬಸ್ ನಲ್ಲಿ ಸಂಚರಿಸುವವರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ.

ಎಚ್. ರಾಮನಗೌಡರ, (ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ)

ಕೋವಿಡ್ ಪೂರ್ವದಲ್ಲಿ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ 4,670 ಬಸ್‌ಗಳು ಸಂಚರಿಸುತ್ತಿದ್ದವು. ಈಗ 3,100 ಬಸ್‌ಗಳ ಸಂಚಾರವಿದ್ದು ಸಂಸ್ಥೆಗೆ ನಿತ್ಯ 2.2 ಕೋಟಿ ಆದಾಯ ಬರುತ್ತಿದೆ. ಈ ರೀತಿ ದಿನನಿತ್ಯ ಹಳ್ಳಿಗಳಿಂದ ಬೇರೆ ಬೇರೆ ಪ್ರದೇಶಗಳಿಂದ ಪಟ್ಟಣಕ್ಕೆ ಉದ್ಯೋಗಕ್ಕೆ ಬರುವವರಿಗೆ ಪಾಸ್ ಗಳಲ್ಲಿ ವಿನಾಯಿತಿ ನೀಡಿರುವುದಕ್ಕೆ ಸಾರ್ವಜನಿಕ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಂಸ್ಥೆಯವ್ರು ಪಾಸ್ ವ್ಯವಸ್ಥಾ ಮಾಡಿರೋದ್ರಿಂದ ನಂಗ್ ಭಾಳ್ ಅನುಕೂಲ ಆಗೈತಿ. ಕೋವಿಡ್ ನಂತಹ ಈ ಟೈಮ್ ನ್ಯಾಗ ನಂಗ್ ಪಾಸ್ ರಿಯಾಯಿತಿ ರೊಕ್ಕದಾಗ ಪಾಸ್ ಕೊಡ್ತಿರೋದ್ರಿಂದ 1000 ರೂಪಾಯಿ ವರೆಗೂ ಉಳಿತಾಯ ಆಗಾಕತ್ತೈತಿ.

ಈ.ಎಸ್. ಅಮರಗೋಳ, (ಪ್ರಯಾಣಿಕ)

Exit mobile version