ಭೂ ಸುಧಾರಣಾ ಕಾಯ್ದೆ ಯಾರಿಗೆ ಲಾಭ- ಯಾರಿಗೆ ನಷ್ಟ?

ಧಾರ್ಮಿಕ ಸಂಸ್ಥೆಗಳು, ಸೇವಾ ಸಂಘಗಳು, ಕಂಪನಿ ಸ್ಥಾಪನೆ, ಸಹಕಾರ ಸಂಘಗಳು ಕೃಷಿ ಭೂಮಿ ಖರೀದಿ ಮಾಡುವುದಕ್ಕೆ ಇಲ್ಲೀವರೆಗೂ ನಿರ್ಬಂಧ ವಿಧಿಸಲಾಗಿತ್ತು. ಈ ಸಂಸ್ಥೆಗಳ ಬಳಿ ಸಾಕಷ್ಟು ಹಣಬಲವಿದ್ದರೂ ಕೃಷಿ ಭೂಮಿಯನ್ನು ಖರೀದಿ ಮಾಡುವುದಕ್ಕೆ ಸಾಧ್ಯವಿರಲಿಲ್ಲ

ಭಾರತದಲ್ಲಿ ಶೇಕಡ 60 ರಷ್ಟು ಜನರು ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿರುವ ದೇಶ. ದೇಶದಲ್ಲಿ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡುವಂತಿರಲಿಲ್ಲ.

ಕೃಷಿ ಭೂಮಿ ಹೊಂದಿದ್ದ ರೈತನೇ ಕೃಷಿ ಭೂಮಿಯನ್ನು ಖರೀದಿ ಮಾಡಬೇಕಿತ್ತು. ಅದರಲ್ಲೂ ಕೂಡ ಮಿತಿಯನ್ನು ಹೇರಲಾಗಿತ್ತು. ಇಂತಿಷ್ಟು ಸದಸ್ಯರಿರುವ ಕುಟುಂಬವು ಇಂತಿಷ್ಟು ಪ್ರಮಾಣದ ಕೃಷಿ ಭೂಮಿಯನ್ನು ಮಾತ್ರ ಖರೀದಿ ಮಾಡಬಹುದು ಎಂದು ಕರ್ನಾಟಕ ಭೂ ಸುಧಾರಣಾ ಕಾಯ್ದೆಯು ಮಿತಿಯನ್ನು ನಿಗದಿ ಮಾಡಿತ್ತು. ಆದರೀಗ ಕರ್ನಾಟಕ ರಾಜ್ಯ ಸರ್ಕಾರ ಆ ಮಿತಿಯನ್ನು ಸಡಿಲಿಕೆ ಮಾಡಿ ಸುಗ್ರೀವಾಜ್ಞೆ ತಂದಿದೆ.

1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಇನ್ನು ಮುಂದೆ ಭೂಹಿಡುವಳಿದಾರ ಅಲ್ಲದಿದ್ದರೂ ನೋಂದಣಿ ಮಾಡಿಕೊಡುವಂತೆ ಅಧಿಸೂಚನೆ ಹೊರಡಿಸುವ ಮೂಲಕ ಉಣ್ಣುವ ಬಾಯಿಗೆ ಮಣ್ಣು ಸುರಿದಂತೆ ಆಗಿದೆ ಎಂಬ ಅಭಿಪ್ರಾಯ‌ ವ್ಯಕ್ತವಾಗಿದೆ.

ಕಾಯ್ದೆ ತಿದ್ದುಪಡಿಯಿಂದ ಆಗುವದೇನು?

ಧಾರ್ಮಿಕ ಸಂಸ್ಥೆಗಳು, ಸೇವಾ ಸಂಘಗಳು, ಕಂಪನಿ ಸ್ಥಾಪನೆ, ಸಹಕಾರ ಸಂಘಗಳು ಕೃಷಿ ಭೂಮಿ ಖರೀದಿ ಮಾಡುವುದಕ್ಕೆ ಇಲ್ಲೀವರೆಗೂ ನಿರ್ಬಂಧ ವಿಧಿಸಲಾಗಿತ್ತು. ಈ ಸಂಸ್ಥೆಗಳ ಬಳಿ ಸಾಕಷ್ಟು ಹಣಬಲವಿದ್ದರೂ ಕೃಷಿ ಭೂಮಿಯನ್ನು ಖರೀದಿ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಅದೇ ಕಾರಣಕ್ಕೆ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳಿಗೆ ಸರ್ಕಾರವೇ ಭೂಮಿ ಕೊಡುತ್ತಿತ್ತು. ಅದೂ ಕೂಡ ಮಾರಾಟವಲ್ಲ, ಇಷ್ಟು ವರ್ಷಗಳ ಅವಧಿಗೆ ಎಂದು ಒಪ್ಪಂದ ಆಗುತ್ತಿತ್ತು.

ಒಂದು ವೇಳೆ ಸರ್ಕಾರದಿಂದ ಭೂಮಿ ಪಡೆದ ಸಂಸ್ಥೆ ಸಮಾಜಕ್ಕೆ ಯಾವುದೇ ಅನುಕೂಲ ಆಗುವ ಕೆಲಸ ಮಾಡುತ್ತಿಲ್ಲ ಎನ್ನುವುದು ಸರ್ಕಾರದ ಗಮನಕ್ಕೆ ಬಂದರೆ ಸರ್ಕಾರ ಭೂಮಿಯನ್ನು ವಾಪಸ್‌ ಪಡೆದುಕೊಳ್ಳಬಹುದಿತ್ತು. ಆದರೆ ಇದೀಗ ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ ಎನ್ನುವಂತೆ ಉಳ್ಳವರೇ ಭೂ ಒಡೆಯರು ಎನ್ನುವ ಸೂತ್ರವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ.

ಬೇರೆ ರಾಜ್ಯದ ಧಾರ್ಮಿಕ ಸಂಸ್ಥೆಗಳು ಭೂಮಿ ಖರೀದಿಸಬಹುದು

ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಧಾರ್ಮಿಕ ಸಂಸ್ಥೆಗಳು ಸಾಕಷ್ಟು ಸಂಪತ್ತು ಹೊಂದಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಗಳು. ಈ ಸಂಸ್ಥೆಗಳು ಇನ್ಮುಂದೆ ರಾಜ್ಯದಲ್ಲಿ ಭೂಮಿಯನ್ನು ಖರೀದಿ ಮಾಡಬಹುದು.

5 ಲಕ್ಷ ಬೆಲೆ ಬಾಳುವ ಜಮೀನಿಗೆ 10 ಲಕ್ಷ ರೂಪಾಯಿ ಕೊಟ್ಟೂ ಖರೀದಿ ಮಾಡಬಹುದು. ಜನರೂ ಸಂತೋಷದಿಂದಲೇ ಭೂಮಿ ಮಾರಾಟ ಮಾಡಬಹುದು. 5 ಎಕರೆ ಜಮೀನು ಇಟ್ಟುಕೊಂಡಿದ್ದ ರೈತ 1 ಎಕರೆ ಇಟ್ಟುಕೊಂಡು ಉಳಿದ 4 ಎಕರೆ ಮಾರಾಟ ಮಾಡಬಹುದು. ಅಥವಾ ಹಣದ ಆಸೆಗೆ ಬಿದ್ದು ಸಂಪೂರ್ಣ ಭೂಮಿಯನ್ನು ಮಾರಾಟ ಮಾಡಲೂ ಬಹುದು.

ಇದೀಗ ಕಾರ್ಪೊರೇಟ್‌ ಕಂಪನಿಗಳು ಹೇಳುತ್ತಿರುವ ಹಾಗೆ ಜಮೀನಿನ ಮಾಲೀಕರಿಗೆ ಸ್ವಂತ ಜಮೀನಿನಲ್ಲಿ ಕೂಲಿ ಮಾಡಲು ಅವಕಾಶ ಕೊಡಬಹುದು. ಹೆಚ್ಚು ಜನರಿದ್ದರೆ ಕುಟುಂಬದ ಒಬ್ಬರಿಗೆ ಕೂಲಿ ಕೆಲಸದ ಅವಕಾಶ ಸಿಗಬಹುದು. ಅಥವಾ ಮಾಲೀಕ ಬೇರೆ ರಾಜ್ಯದವನಾದರೆ ತನ್ನ ಊರುಗಳಿಂದ ಜನರನ್ನು ಕರೆತಂದು ಕೆಲಸ ಮಾಡಿಸಲೂ ಬಹುದು.

ಭೂಮಿ ಮಾರುವುದರಿಂದ ರೈರಿಗೇನು ಲಾಭ..?

ಈ ರೀತಿಯ ವಾದವೊಂದು ಶುರುವಾಗಿದೆ. ಓರ್ವ ರೈತ ತನಗೆ ಎಷ್ಟು ಬೇಕು ಅಷ್ಟು ಮಾತ್ರ ಭೂಮಿ ಇಟ್ಟುಕೊಂಡು ಉಳಿದ ಭೂಮಿಯನ್ನು ಮಾರುವುದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸುತ್ತಿದ್ದಾರೆ. ನಿಜ, ಭೂಮಿಯನ್ನು ಮಾರುವುದರಿಂದ ರೈತನಿಗೂ ಸಾಕಷ್ಟು ಹಣ ಸಿಗುತ್ತದೆ. ಆದರೆ ಸಮಸ್ಯೆ ಇರುವುದು ರೈತ ಭೂಮಿ ಮಾರಾಟ ಮಾಡಿ ಗಳಿಸಿದ ಹಣ ವೆಚ್ಚವಾಗುತ್ತದೆಯೇ ವಿನಃ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.

ಉಳ್ಳವರು ಲಕ್ಷ ಲಕ್ಷಗಳನ್ನು ಭೂಮಿ ಮೇಲೆ ಹೂಡಿಕೆ ಮಾಡುತ್ತಾ ಸಾಗಿದರೆ, ಮತ್ತೆ ಯಥಾಸ್ಥಿತಿ ನಮ್ಮ ಪೂರ್ವಜರು ಭೂ ಒಡೆಯರ ಬಳಿ ಕೂಲಿಯಾಗಿ ಕೆಲಸ ಮಾಡಬೇಕಿತ್ತು. ಅದೇ ರೀತಿಯ ಸ್ಥಿತಿ ನಿರ್ಮಾಣ ಆಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೀರಾವರಿ ಭೂಮಿ ಮಾರಲು ಅವಕಾಶ ಸದ್ಯಕ್ಕಿಲ್ಲ..!

ರಾಜ್ಯದಲ್ಲಿ ಕೃಷಿ ಅಚ್ಚುಕಟ್ಟು ಪ್ರದೇಶ ಮಾರಾಟ ಮಾಡುವುದಕ್ಕೆ ಈ ಕಾಯ್ದೆ ಈ ಕ್ಷಣಕ್ಕೆ ಅನ್ವಯ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾರ್ಪೊರೇಟ್‌ ಕಂಪನಿಗಳು ಭೂಮಿ ಒಡೆತನ ಸಾಧಿಸಿದ ಬಳಿಕ ಸರ್ಕಾವರೇ ಈಗಿರುವ ನಾಲೆಗಳ ಬದಲು ನಾಲೆ ಇಲ್ಲದೆ ಬರಡು ಬಿದ್ದಿರುವ ಜಾಗಳಿಗೆ ನೀರನ್ನು ಹರಿಸುತ್ತದೆ ಅಥವಾ ನೀರಾವರಿ ಭೂನಿಯನ್ನೂ ಖರೀದಿ ಮಾಡಲು ಅವಕಾಶ ಕೊಡುತ್ತದೆ.

ಬರಡು ಭೂಮಿಯ ಮಾಲೀಕರು ಮಾರಾಟ ಮಾಡಿ ಶ್ರೀಮಂತರಾದರು, ಆದರೆ ನೀರಾವರಿ ಭೂಮಿಯನ್ನು ಇಟ್ಟುಕೊಂಡಿರುವ ನಾವು ಬಡವಾರಾಗಿಯೇ ಇರಬೇಕೆ..? ಎನ್ನುವ ಕೂಗೂ ಕೇಳುವಂತೆ ಮಾಡುವ ಮೂಲಕ ನೀರಾವರಿ ಭೂಮಿ ಮಾರಾಟಕ್ಕೂ ಹಸಿರು ನಿಶಾನೆ ತೋರುವ ಎಲ್ಲಾ ಸಾಧ್ಯತೆಗಳೂ ಇವೆ.

ಜನರ ಸ್ಥಿತಿ ಹೇಗಾಗಿದೆ ನೋಡಿ

ಈಗ ಒಮ್ಮೆ ಬೆಂಗಳೂರಿನ ಒಳಗೆ ಹಾಗೂ ಆಸುಪಾಸಿನಲ್ಲಿ ಇರುವ ಜನರನ್ನು ಒಂದು ಸುತ್ತು ಹಾಕಿ ಕೇಳಿಕೊಂಡು ಬನ್ನಿ, ನಮ್ಮಪ್ಪ ಅಷ್ಟು ಎಕರೆ ಜಮೀನು ಇಟ್ಟಿದ್ದ. ಈಗ ನಮ್ಮದು ಜಮೀನಿಲ್ಲ, ಒಂದು ಮನೆಯಿದೆ. ಅಷ್ಟೇ. ಇದೀಗ ಕರೋನಾ ಬಂದಿರುವ ಕಾರಣಕ್ಕೆ ಬಾಡಿಗೆದಾರರು ಮನೆ ಖಾಲಿ ಮಾಡಿಕೊಂಡು ತಮ್ಮ ಊರುಗಳಿಗೆ ಹೋಗಿದ್ದಾರೆ. ನಾವು ಇಡೀ ಕುಟುಂಬ ಬಾಡಿಗೆ ಹಣದಿಂದಲೇ ಜೀವನ ಮಾಡುತ್ತಿದ್ದೆವು. ಇದೀಗ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ.

ಅಂದರೆ, ಕೋಟಿ ಕೋಟಿ ಬೆಲೆ ಬಾಳುವ ಮನೆ ಇದೆ. ಆದರೆ ಜೀವನ ಮಾಡಲು ಕಷ್ಟವಾಗಿದೆ. ಆದರೆ ಹಳ್ಳಿಗಳಲ್ಲಿ ನಾಲ್ಕೈದು ಎಕರೆ ಜಮೀನು ಹೊಂದಿರುವ ಜನರನ್ನು ಕೇಳಿ ನೋಡಿ. ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಕರೋನಾ ಸೋಂಕು ಹೆಚ್ಚಾಯಿತು. ನಾವು ನಗರ ತೊರೆದು ಊರಿಗೆ ಬಂದು ಕೃಷಿ ಮಾಡುತ್ತಿದ್ದೇವೆ. ಒಳ್ಳೆ ಫಸಲು ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ. ಇಷ್ಟೇ ವ್ಯತ್ಯಾಸ, ಭೂಮಿ ಇರುವ ರೈತನಿಗೂ. ಭೂಮಿ ಮಾರಿಕೊಂಡವರಿಗೂ.

ತನ್ನ ಭೂಮಿಯನ್ನು ತಾನೇ ಮಾರಿಕೊಂಡರೆ ತಪ್ಪೇನು ಎನ್ನುವ ವಾದಕ್ಕೆ ಇನ್ನೂಂದು ಆತಂಕಕಾರಿ ವಿಚಾರ ಹೇಳುವುದಿದೆ. ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಭೂಮಿ ಖರೀದಿ ಮಾಡುತ್ತಾರೆ. ತನ್ನೂರಿನ ನಾಗರಿಕರನ್ನೇ ಕರೆತಂದು ಕೆಲಸವನ್ನೂ ಮಾಡಿಸುತ್ತಾರೆ. ಮಾಡಿಸಲಿ ಬಿಡಿ ನಾವು ಬೇರೆ ಕಾಯಕ ಮಾಡೋಣ ಎನ್ನಬಹುದು.

ಆದರೆ ಕರ್ನಾಟಕ ಸರ್ಕಾರ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ಮಾಡಿದ್ದು, ತಾನು ಬೆಳೆದ ಬೆಳೆಯನ್ನು ಕರ್ನಾಟಕ ಮಾತ್ರವಲ್ಲದೆ ಬೇರೆ ಯಾವ ರಾಜ್ಯದಲ್ಲಾದರೂ ಮಾರಾಟ ಮಾಡಲು ಕಾನೂನು ಅವಕಾಶ ಕಲ್ಪಿಸುತ್ತದೆ. ತಾನು ಬೆಳೆದ ಬೆಳೆಯನ್ನು ತನ್ನೂರಿಗೆ ತೆಗೆದುಕೊಂಡು ಹೋದರೆ ಅಥವಾ ದುಬಾರಿ ದರಕ್ಕೆ ಮಾರಾಟ ಮಾಡಲು ಮುಂದಾದರೆ..? ಜನರು ಏನು ತಿನ್ನಬೇಕು..? ಅಪ್ಪ ಕೊಟ್ಟ ಪಿತ್ರಾರ್ಜಿತ ಆಸ್ತಿಯನ್ನು ಯಾವತ್ತೂ ಮಾರಾಟ ಮಾಡಬಾರದು. ಅದನ್ನು ತನ್ನ ಪೀಳಿಗೆಗೆ ಉಳಿಸಬೇಕು. ತಾನು ಅದೇ ಜಮೀನಿನಲ್ಲಿ ದುಡಿದು ತಿನ್ನಬೇಕು ಎಂಬ ಮಾತಿದೆ. ಸರ್ಕಾರದ ಕಾಯ್ದೆಯನ್ನು ತೀವ್ರವಾಗಿ ಖಂಡಿಸಿ, ಪ್ರತಿಭಟಿಸುವ ಜೊತೆಗೆ ಯಾವೊಬ್ಬ ರೈತರೂ ಭೂಮಿ ಮಾರಾಟ ಮಾಡದೆ ಇರಲು ದೃಢ ನಿಶ್ಚಯ ಮಾಡಬೇಕಿದೆ.

ಈ ಲೇಖನ ಮೊದಲು pratidhvani.com ನಲ್ಲಿ ಪ್ರಕಟವಾಗಿದೆ.

Exit mobile version