ನೆರೆ ಸಂತ್ರಸ್ಥರ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಿ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

gadag Dc flood

ನೆರೆ ಸಂತ್ರಸ್ಥರ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಿ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ: ಜಿಲ್ಲೆಯಲ್ಲಿ ಪ್ರತಿವರ್ಷ ಪ್ರವಾಹ ಉಂಟಾಗುತ್ತಿದ್ದು, ಇದರಿಂದ ಮಲಪ್ರಭಾ, ಬೆಣ್ಣೆಹಳ್ಳ ಹಾಗೂ ತುಂಗಭದ್ರಾ ನದಿ ಪಾತ್ರದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂತ್ರಸ್ಥರಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ಬದಲಾಗಿ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಕಾನ್ಪರೆನ್ಸ್ ಹಾಲ್‍ನಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಅವರು ಮಾತನಾಡಿದರು.

ಮುಂಬರುವ ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಮಳೆ ಸುರಿದರೂ, ಜಲಾಶಯಗಳಿಂದ ನೀರು ಬಿಟ್ಟರೂ ಕಾಳಜಿ ಕೇಂದ್ರ ಹಾಗೂ ತಾತ್ಕಾಲಿಕ ಶೆಡ್ ನಿರ್ಮಿಸುವ ಸಂದರ್ಭ ಎದುರಾಗದಂತೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದರು.

ಮಲಪ್ರಭಾ, ತುಂಗಭದ್ರಾ ಹಾಗೂ ಬೆಣ್ಣೆಹಳ್ಳ ಉಕ್ಕಿ ಹರಿದರೆ ಜಿಲ್ಲೆಯ ನರಗುಂದ, ರೋಣ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರತಿವರ್ಷ ಪ್ರವಾಹ ಉಂಟಾಗುವುದು ಎದುರಾಗುತ್ತಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕುವ ಮೊದಲು ಸುರಕ್ಷಿತ ಪ್ರದೇಶಗಳಿಗೆ ಶೀಘ್ರವೇ ಸ್ಥಳಾಂತರಿಸಬೇಕು. ನೆರೆ ಹಾವಳಿಗೆ ತುತ್ತಾಗಿರುವ ಜನ ಜಾನುವಾರುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಸಂತ್ರಸ್ಥರ ಕಾಳಜಿ ಕೇಂದ್ರಗಳಲ್ಲಿ ಯಾವುದೇ ಕುಂದು ಕೊರತೆ ಆಗದಂತೆ ನಿಗಾವಹಿಸಬೇಕು. ಪದೇ ಪದೇ ನೆರೆ ಹಾವಳಿಗೆ ತುತ್ತಾಗುತ್ತಿರುವ ಗ್ರಾಮದ ಜನರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಕ್ತವಾದ ಜಾಗ ಗುರುತಿಸಬೇಕು. ಈಗಾಗಲೇ ಸಂತ್ರಸ್ಥರಿಗೆ ನಿರ್ಮಿಸಲಾಗಿದ್ದ ಮನೆಗಳ ಹಕ್ಕುಪತ್ರಗಳನ್ನು ಕೆಲವರಿಗೆ ವಿತರಿಸಲಾಗಿದ್ದು, ಇನ್ನುಳಿದವರಿಗೂ ಮನೆಗಳ ಹಕ್ಕುಪತ್ರ ನೀಡಬೇಕು. ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯವನ್ನು ಪ್ರಥಮಾದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಳೆದ ವರ್ಷದಂತೆ ಜಿಲ್ಲೆಯಲ್ಲಿ ಉದ್ಭವಿಸಿರುವ ಪ್ರವಾಹ ಪರಿಸ್ಥಿತಿಯನ್ನು ಕೋವಿಡ್-19 ಸೋಂಕು ನಿಯಂತ್ರಿಸುವುದರ ಜೊತೆಗೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಪ್ರಾಣಹಾನಿ ಸಂಭವಿಸದಂತೆ ಕಟ್ಟೆಚ್ಚರ ವಹಿಸಬೇಕು. ಸದ್ಯ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದು, ಪುನಃ ಎಡಬಿಡದೆ ಮಳೆ ಸುರಿದರೆ ನೀರಿನ ಪ್ರಮಾಣ ಹೆಚ್ಚಳವಾಗುವ ಸಾದ್ಯತೆ ಇದೆ. ಸಂತ್ರಸ್ತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದರು.

ನಿರಂತರ ಮಳೆ ಸುರಿಯುತ್ತಿರುವುದರಿಂದ ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿಯೇ ವಾಸ ಮಾಡುತ್ತಿರುವವರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಬೇಕು. ಚರಂಡಿಗಳನ್ನು ಸ್ವಚ್ಚಗೊಳಿಸುವ ಮೂಲಕ ಸರಾಗವಾಗಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಡಿಮೆ ಇದ್ದು, ಸೋಂಕು ನಿಯಂತ್ರಿಸಲು ಇನ್ನಷ್ಟು ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸಬೇಕು. ಪ್ರತಿ ಸೋಂಕಿತರ 10 ಜನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಶೀಘ್ರ ಕಾರ್ಯ ಆಗಬೇಕು ಎಂದರು.

ಸೋಂಕು ಕಂಡು ಬಂದ ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶವೆಂದು ಗುರುತಿಸಿ, ಪ್ರದೇಶ ವ್ಯಾಪ್ತಿ ಆರೋಗ್ಯ ತಪಾಸಣೆ ಹಾಗೂ ಸರ್ವೇ ಕಾರ್ಯ ಕೈಗೊಳ್ಳಬೇಕು. ವೈದ್ಯಾಧಿಕಾರಿಗಳು ಸ್ಯಾಂಪಲ್ಸ್ ಕಲೆಕ್ಟ್, ರ್ಯಾಪಿಡ್ ಟೆಸ್ಟ್ ಮಾಡಬೇಕು. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕೊರತೆ ಆಗದಂತೆ ನಿಗಾವಹಿಸಬೇಕಲ್ಲದೇ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಎಸ್.ಎನ್., ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಲೂಕ ಪಂಚಾಯತ್ ಇಒ ಜಿನಗಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Exit mobile version