ಮಲಗಿದೆ ರಾಜ್ಯ ಮಾಹಿತಿ ಹಕ್ಕು ವೆಬ್ ಸೈಟ್!: ಮಾಹಿತಿ ಮುಚ್ಚಿಡುವ ಯತ್ನದ ಆರೋಪ

ಜೂನ್ ಮಧ್ಯಭಾಗದಿಂದ ರಾಜ್ಯದ ಆರ್.ಟಿ.ಐ ವೆಬ್ ಸೈಟ್ ನಿಷ್ಕ್ರಿಯವಾಗಿದೆ ಎಂದು ಹಲವಾರು ಆರ್.ಟಿ.ಐ ಕಾರ್ಯಕರ್ತರು ಆರೋಪಿಸಿದ್ದಾರೆ.

ಬೆಂಗಳೂರು: ಜನರಿಗೆ ಮಾಹಿತಿ ಒದಗಿಸಲೆಂದೇ ಮಾಹಿತಿ ಹಕ್ಕು ಜಾರಿಗೆ ಬಂದಿದೆ. ಆದರೆ, ಜನರು ಬಯಸುವ ಮಾಹಿತಿ ನೀಡಲು ಮಾಹಿತಿ ಹಕ್ಕು ಆಯೋಗ ಹಿಂದೇಟು ಹಾಕುತ್ತಿದೆಯೇ ಎಂಬ ಸಂದೇಹ ಬರುವಂತಾಗಿದೆ.

ಕಳೆದ ಒಂದು ತಿಂಗಳಿಂದ ರಾಜ್ಯದ ಮಾಹಿತಿ ಹಕ್ಕು ಅಂತರ್ಜಾಲ ತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಜಿ ಹಾಕಲು ಬಯಸುವವರು ನಿರಾಶರಾಗಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕೋವಿಡ್ ಸಂದರ್ಭದಲ್ಲಂತೂ ಆದಷ್ಟು ಎಲ್ಲವೂ ಆನ್ ಲೈನ್ ಮೂಲಕವೇ ನಡೆದರೆ ಸುರಕ್ಷಿತ. ಆದರೆ ಇಂತಹ ಸಂದರ್ಭದಲ್ಲೇ ಆರ್.ಟಿ.ಐ ವೆಬ್ ಸೈಟ್ ಜನಸ್ನೇಹಿ ಆಗುವ ಬದಲು ಜನ ವಿರೋಧಿಯಂತೆ ಕೆಲಸ ಮಾಡುತ್ತಿದೆ ಎಂದು ಹಲವಾರು ಆರ್.ಟಿ.ಐ ಕಾರ್ಯಕರ್ತರು ಆರೋಪಿಸಿದ್ದಾರೆ.

ಆರ್.ಟಿ.ಐ ಕರ್ನಾಟಕ ಆನ್ ಲೈನ್ ವೆಬ್ ಸೇಟ್

ಅರ್ಜಿಗೆ ಶುಲ್ಕ ಭರಿಸುವ ಪೇಮೆಂಟ್-ಗೇಟ್ವೇ ಕೆಲಸ ಮಾಡುತ್ತಿಲ್ಲ. ಇದರಿಂದ ಅರ್ಜಿ ಹಾಕುವುದನ್ನೇ ನಿರ್ಬಂಧಿಸಿದಂತಾಗಿದೆ. ಇದು ಆಯೋಗದ ಅಪಾರದರ್ಶಕ ನೀತಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜನಸಾಮಾನ್ಯರಿಗಿದ್ದ ಒಂದು ಅವಕಾಶವೂ ಮುಚ್ಚಿದಂತಾಗಿದೆ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್ ಮರ್ಚಂಟ್.

ವಕೀಲ ಮತ್ತು ಆರ್.ಟಿ.ಐ ಕಾರ್ಯಕರ್ತ ಎಸ್. ಉಮಾಪತಿಯವರ ಪ್ರಕಾರ, ಆರಂಭವಾದಾಗಿನಿಂದ ಈ ವೆಬ್ ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಪ್ರಮುಖ ಇಲಾಖೆಗಳ ಲಿಂಕ್ ಕೂಡ ಇದರಲ್ಲಿ ಲಭ್ಯವಾಗುವುದಿಲ್ಲ.

ಆರ್.ಟಿ.ಐ ಆಯೋಗದ ಮೂಲದ ಪ್ರಕಾರ, ತಾಂತ್ರಿಕ ಸಮಸ್ಯೆಯಾಗಿದೆ. ಸರಿಪಡಿಸಲು ಇ-ಆಡಳಿತ ವಿಭಾಗಕ್ಕೆ ಹೇಳಿದ್ದೇವೆ. ಆದರೆ ಅವರು ವಿಳಂಬ ಮಾಡುತ್ತಿದ್ದಾರೆ. ಅದು ಉದ್ದೇಶಪೂರ್ವಕ ಇದ್ದರೂ ಇರಬಹುದು. ಕೋವಿಡ್ ಸಂದರ್ಭದಲ್ಲೇ ವೆಬ್ ಸೈಟ್ ಇಲ್ಲವೆಂದರೆ ಅದು ಮಾಹಿತಿ ಹಕ್ಕನ್ನೇ ಕೊಲ್ಲುವ ಕೆಲಸ ಅಲ್ಲವೇ?

Exit mobile version