‘ಶಾಲೆ ಯಾವಾಗ ಆರಂಭಿಸೋಣ? ಪಾಲಕರ ಅಭಿಪ್ರಾಯ ಕೇಳಿ’: ರಾಜ್ಯಗಳಿಗೆ ಕೇಂದ್ರದ ತರಾತುರಿಯ ಸಂದೇಶ!

school parents meeting

‘ಶಾಲೆ ಯಾವಾಗ ಆರಂಭಿಸೋಣ? ಪಾಲಕರ ಅಭಿಪ್ರಾಯ ಕೇಳಿ’ ರಾಜ್ಯಗಳಿಗೆ ಕೇಂದ್ರದ ತರಾತುರಿಯ ಸಂದೇಶ!

 ಬಹುಪಾಲು ರಾಜ್ಯ ಸರ್ಕಾರಗಳು ಕೆಲವು ಕಡೆ ಸಂಪೂರ್ಣ ಮತ್ತು ಕೆಲವು ಕಡೆ ಭಾಗಶ: ಲಾಕ್ ಡೌನ್ ಮೊರೆ ಹೋಗಿವೆ. ಈ ಸಂದರ್ಭದಲ್ಲಿ ಶಾಲೆ ಯಾವಾಗ ಶುರು ಮಾಡೋಣ ಎಂದು ಕೇಂದ್ರ ಸಂದೇಶ ಕಳಿಸಿದೆ!

ನವದೆಹಲಿ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಿಭಾಗವು ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮತ್ತು  ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತರಾತುರಿಯಲ್ಲಿ ಒಂದು ಪತ್ರ ಕಳಿಸಿ, 3 ದಿನದಲ್ಲಿ ವಿದ್ಯಾರ್ಥಿಗಳ ಪಾಲಕರ ಅಭಿಪ್ರಾಯ ಸಂಗ್ರಹಿಸಿ, ಶಾಲೆ ಯಾವಾಗ ಆರಂಭಿಸಬೇಕು ಎಂದು ಸಲಹೆ ಪಡೆಯಿರಿ ಎಂದು ತಿಳಿಸಿದೆ.

ಅಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್ –ಯಾವ ತಿಂಗಳಲ್ಲಿ ಶಾಲೆ ಮರು ಆರಂಭವಾದರೆ ಒಳ್ಳೆಯದು ಎಂದು ಪಾಲಕರಿಂದ ತಿಳಿದುಕೊಂಡು, ಸರ್ಕಾರದ ಅಭಿಪ್ರಾಯ ರೂಪಿಸಿ ಕೂಡಲೇ ಕೇಂದ್ರಕ್ಕೆ ಕಳಿಸಿಕೊಡಿ ಎಂದು ತಿಳಿಸಿದೆ.

  ತರಾತುರಿಯೇಕೆ?

ಅಭಿಪ್ರಾಯ ಸಂಗ್ರಹಕ್ಕೆ ಕೇವಲ 3 ದಿನದ ಅವಕಾಶ ನೀಡಲಾಗಿದೆ. ಇವತ್ತು ಸಾಯಂಕಾಲಕ್ಕೆ ಅವಧಿ ಮುಗಿಯಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಇದೆಲ್ಲ ಸಾಧ್ಯವೇ ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಈ ಪತ್ರ ಕಳಿಸಲಾಗಿದೆ ಎಂದು ಹಲವಾರು ಶಿಕ್ಷಕರು ಆರೋಪಿಸಿದ್ದಾರೆ. ದೆಹಲಿಯ ಕೇಂದ್ರೀಯ ವಿದ್ಯಾಲಯದ ಮುಖ್ಯ ಶಿಕ್ಷಕಿಯೊಬ್ಬರು ನಮಗೆ ಆ ಪತ್ರವೇ ತಲುಪಿಲ್ಲ ಎಂದಿದ್ದಾರೆ. ಶುಕ್ರವಾರ ಸಂಜೆ ಈ ಸಂದೇಶ ಕಳಿಸಲಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ. ಫೋನ್, ಇ-ಮೇಲ್ ಮತ್ತು ಲಿಖಿತ ಪತ್ರ ಈ ಯಾವುದರಲ್ಲಿ ಸಾಧ್ಯವೋ ಅದರಲ್ಲಿ ವಿಷಯ ಮುಟ್ಟಿಸಿದ್ದೇವೆ ಎನ್ನುತ್ತಿದೆ.

ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ ಮತ್ತು ಲಾಕ್ ಡೌನ್ ಮರಳಿ ಜಾರಿಗೆ ಬರುತ್ತಿದೆ. ಇಂತಹ ಸಮಯದಲ್ಲಿ 3 ದಿನದಲ್ಲಿ ಎಲ್ಲವನ್ನೂ ಅವಸರದಲ್ಲಿ ನಿರ್ಣಯಿಸುವ ತುರ್ತಾದರೂ ಏನಿದೆ ಎಂದು ಕೆಲವು ಪೋಷಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ ಹೊತ್ತಿಗೆ ಸೋಂಕಿನ ಪ್ರಮಾಣ ತೀವ್ರವಾಗಬಹುದು ಎಂದು ಹಲವಾರು ಸಂಸ್ಥೆಗಳು ಅಂದಾಜಿಸಿವೆ. ಇಂತಹ  ಸಂದರ್ಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತರಾತುರಿಯಲ್ಲಿ ಅಪ್ರಾಯೋಗಿಕ ಕಸರತ್ತಿಗೆ ಮುಂದಾಗಿದೆ.

Exit mobile version