ಗದಗ ಜಿಲ್ಲೆಯಲ್ಲಿ ಅಂಗನವಾಡಿ ಅಕ್ಕಂದಿರ 3 ತಿಂಗಳ ಸಂಬಳಕ್ಕೂ ಲಾಕ್ಡೌನ್!: ಬೆಂಗಳೂರಿಂದ ಪಾಸ್ ವರ್ಡ್ ತಂದರೆ ಲಾಕ್ ಓಪನ್!

Anganawadi

ಗದಗ ಜಿಲ್ಲೆಯಲ್ಲಿ ಅಂಗನವಾಡಿ ಅಕ್ಕಂದಿರ 3 ತಿಂಗಳ ಸಂಬಳಕ್ಕೂ ಲಾಕ್ಡೌನ್!

ಖಾಲಿ-ಪೀಲಿ ತಾಂತ್ರಿಕ ನೆಪ ಹೇಳುತ್ತಿರುವ ಅಧಿಕಾರಿಗಳು ತಮ್ಮ ಸೋಮಾರಿತನ, ನಿರ್ಲ್ಯಕ್ಷದ ಕಾರಣದಿಂದ ಮುಂಡರಗಿ ತಾಲೂಕಿನ ಅಂಗನವಾಡಿ ಅಕ್ಕಂದಿರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದ್ದಾರೆ.

ಗದಗ: ಮೂರು ತಿಂಗಳು ಮುಗಿದು ನಾಲ್ಕನೆ ತಿಂಗಳು ಬಂದರೂ ಪಗಾರ ಕೊಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಫಲವಾಗಿದೆ. ಇದರ ಪರಿಣಾಮವಾಗಿ ಮುಂಡರಗಿ ತಾಲೂಕಿನ 172 ಅಂಗನವಾಡಿ ಕಾರ್ಯಕರ್ತೆಯರು ಮತ್ತು 172 ಸಹಾಯಕಿಯರು ಸಾಲ-ಸೋಲ ಮಾಡಿ ಮನೆ ನಡೆಸುವಂತಾಗಿದೆ.

ಏಪ್ರಿಲ್ ನಿಂದ ಜೂನ್ ವರೆಗಿನ ವೇತನವಿಲ್ಲದೇ, 2018ರಿಂದ ಹೆಚ್ಚುವರಿ ಸಹಾಯಧನವನ್ನೂ ನೀಡಿಲ್ಲ. ಇದಕ್ಕೆ ಏನೇನೋ ತಾಂತ್ರಿಕ ಕಾರಣ ಹೇಳುತ್ತ ತಮ್ಮ ಬೇಜವಾಬ್ದಾರಿಯನ್ನು ಸಿಡಿಪಿಒ ಮತ್ತು ಇತರ ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ.

ತಮ್ಮದೇ ಇಲಾಖೆಯ ನೌಕರರು ಲಾಕ್ ಡೌನ್ ಸಂದರ್ಭದಲ್ಲಿ ಹಗಲಿರುಳು ದುಡಿಯುತ್ತ ಕಷ್ಟ ಪಡುತ್ತಿದ್ದು, ಅವರಿಗೆ ಅವರ ಹಕ್ಕಾದ ಸಂಬಳವನ್ನು 3 ತಿಂಗಳಿಂದ ನೀಡಿಲ್ಲ ಎನ್ನುವುದು ನಾಚಿಕೆಗೇಡಿನ ವಿಷಯ ಎಂಬುದು ಇಲಾಖೆಗೆ ನಾಚಿಕೆ ತರುವ ವಿಷಯವಾಗಬೇಕಿತ್ತು.           

ಲಾಕ್ಡೌನ್ ಎಂಬ ಮಿಸ್ಸಿಂಗ್ ಲಿಂಕ್!

ದಿಢೀರನೆ ಲಾಕ್ಡೌನ್ ಘೋಷಣೆಯಾಗಿದ್ದನ್ನೇ ಸಂಬಳ ವಿಳಂಬಕ್ಕೆ ನೆಪ ಹೇಳುತ್ತ ಬರಲಾಗಿದೆ. ಲಾಕ್ಡೌನ್ ಮುಗಿದು ರಾಜ್ಯದಲ್ಲಿ ಎಲ್ಲ ಸುಗಮವಾಗಿ ನಡೆದರೂ, ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆ ಮಾತ್ರ ಇನ್ನೂ ಅದೇ ಗುಂಗಿನಲ್ಲಿದೆ.

ಹಿಂದಿನ ಸಿಡಿಪಿಒ ದಸ್ತಗೀರ್ ಮುಲ್ಲಾ, ಮಾರ್ಚ್ 23ರಂದು ಬಿಲ್ ಸಿದ್ಧಪಡಿಸಿದ್ದರು. ಅವರಿಗೆ ಬೇರೆ ಕಡೆ ವರ್ಗಾವಣೆ ಆಗಿತು. ಮಾರ್ಚ್ 23ರಂದೇ ಅಧಿಕಾರ ವಹಿಸಿಕೊಂಡ ಹೊಸದಾಗಿ ಬಂದ ಸಿಡಿಪಿಒ ಹುಲಿಗೆಮ್ಮ ಕುಕನೂರು ಇಲ್ಲಿವರೆಗೂ ಸಂಬಳದ ವ್ಯವಸ್ಥೆ ಮಾಡಲು ವಿಫಲರಾಗಿದ್ದಾರೆ. ಬಿಲ್ ಎಲ್ಲ ಸಿದ್ಧವಿದ್ದರೂ ಅವರೇಕೆ ಪ್ರಕ್ರಿಯೆ ಮುಂದುವರೆಸಲಿಲ್ಲ? ಅವರು ಬರುವಾಗ ಇಲಾಖೆಯ ಕೇಂದ್ರ ಕಚೇರಿಯಿಂದ ಪಾಸ್ ವರ್ಡ್ ತರಬೇಕಿತ್ತಂತೆ, ಅವರು ಹಾಗೇ ಬಂದರಂತೆ. ಮಾರ್ಚ್ 24ಕ್ಕೆ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಅವರಿಗೆ ಬೆಂಗಳೂರಿಗೆ ಹೋಗಲಾಗಲಿಲ್ಲವಂತೆ! ಅಬ್ಬಾ ಎಂತೆಂತಹ ಕಾರಣಗಳು?

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಅಂಗನವಾಡಿ ಸಿಬ್ಬಂಧಿಗಳಿಗೆ ಮೂರು ತಿಂಗಳಿಂದ ಸಂಬಳದ ಸಮಸ್ಯೆಯಾಗಿದೆ. ಕೋವಿಡ್19 ಸಂದರ್ಭದಲ್ಲಿ ಅವರಿಂದ ಹೆಚ್ಚುವರಿ ಕೆಲಸ ಮಾಡಿಸಿಕೊಂಡ ನಂತರವೂ ಕನೀಷ್ಟ ಸಂಬಳದ ವ್ಯವಸ್ಥೆ ಮಾಡುವ ಕೃತಜ್ಞತೆಯೂ ಇಲಾಖೆಗೆ ಇಲ್ಲದಿರುವುದು ದುರಂತ.

ಮಾರುತಿ ಚಿಟಗಿ, ಕಾರ್ಮಿಕ ಮುಖಂಡ

ಲಾಕ್ಡೌನ್ ಮುಕ್ತವಾದ ನಂತರವಾದರೂ ಅವರು ಆ ಕೆಲಸ ಮಾಡಬೇಕಿತ್ತು. ‘ಸಂಬಳ ಬಟವಾಡೆ ಆಗದ ಪರಿಣಾಮ ಅನುದಾನ ವಾಪಸ್ ಹೋಗಿದೆ’ ಎನ್ನುತ್ತಿದ್ದಾರೆ ಸಿಡಿಪಿಒ. ಶಿವನೇ, ಅದೆಲ್ಲಿ ಹೋಗಿರಲ್ಲ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಿವರಿಸಿ ಆ ಅನುದಾನ ತರಿಸಿಕೊಳ್ಳಿ ಎಂದು ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿ ಮಾಡಿಯೇ ಸುಸ್ತಾಗಿದ್ದಾರೆ. ಈ ಕುರಿತಾಗಿ ಹಲವು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಎಂಎಲ್ಎ ಕಳಕಪ್ಪ ಬಂಡಿಯವರಿಗೆ ಇಂಥದ್ದೆಲ್ಲ ಇಶ್ಯೂನೇ ಅಲ್ಲ.

2018ರಿಂದ ಹೆಚ್ಚುವರಿ ಸಹಾಯಧನವಿಲ್ಲ

ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ರೂ ಮತ್ತು ಸಹಾಯಕಿಯರಿಗೆ 5 ಸಾವಿರ ರೂ ಸಂಬಳವಿದೆ. ಅವರಿಗೆ ಈಗ 3 ತಿಂಗಳ ವೇತನ ಅನುಕ್ರಮವಾಗಿ 30 ಮತ್ತು 15 ಸಾವಿರ ರೂ. ನೀಡಬೇಕಿದೆ. ಇದಲ್ಲದೇ 2018ರಿಂದ ಮುಂಡರಗಿ ತಾಲೂಕಿನ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 22 ತಿಂಗಳುಗಳ ಹೆಚ್ಚುವರಿ ಸಹಾಯಧನ ನೀಡಬೇಕಿದೆ. ಕಾರ್ಯಕರ್ತೆಯರಿಗೆ ಮಾಸಿಕ 1,500 ರೂ.ನಂತೆ 33 ಸಾವಿರ ರೂ ಮತ್ತು ಸಹಾಯಕಿಯರಿಗೆ ಮಾಸಿಕ 750 ರೂ.ನಂತೆ 16,500 ರೂ ಸಹಾಯಧನವನ್ನೂ ನೀಡದೇ ಗೋಳು ಹೊಯ್ದುಕೊಳ್ಳಲಾಗುತ್ತಿದೆ.

ನಾನು ಬಜೆಟ್ ಪ್ರಸ್ತಾಪ ಸಲ್ಲಿಕೆಯಾದ ನಂತರ ಮಾರ್ಚ್ 23ಕ್ಕೆ ಅಧಿಕಾರ ವಹಿಸಿಕೊಂಡಿದ್ದೇನೆ. ಹಿಂದಿನ ಸಿಡಿಪಿಓ ಅವರ ತಪ್ಪಿನಿಂದ ಸಂಬಳದ ಅನುದಾನ ಇಲಾಖೆಗೆ ವಾಪಸ್ ಹೋಗಿದೆ. ಈಗ ಅದರ ಮರು ನಗದೀಕರಣಕ್ಕೆ ಪ್ರಸ್ತಾಪ ಸಲ್ಲಿಸಿದ್ದು ಎರಡ್ಮೂರು ದಿನದಲ್ಲಿ ಅನುದಾನ ಲಭ್ಯವಾಗಲಿದೆ. ಸಂಬಳದ ಜೊತೆಗೆ ಹಳೆಯ ಪ್ರೋತ್ಸಾಹ ಧನದ ಬಾಕಿಯನ್ನು ಬಟವಾಡೆ ಮಾಡಲಾಗುವುದು.

ಹುಲಿಗೆಮ್ಮ ಕುಕನೂರು, ಸಿಡಿಪಿಓ ಮುಂಡರಗಿ

ಕೋರೊನಾ ವಾರಿಯರ್ಸ್ ಅಂತೆಲ್ಲ ಅಂಗನವಾಡಿ ನೌಕರರನ್ನು ದುಡಿಸಿಕೊಳ್ಳುವ ಜಿಲ್ಲಾಡಳಿತಕ್ಕೆ ಸಂಬಳದ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಎಂದರೆ ಅದನ್ನು ನಂಬುವುದಾದರೂ ಹೇಗೆ? 22 ತಿಂಗಳ ಸಹಾಯಧನವೇ ಸುಮಾರು 85 ಲಕ್ಷ ರೂ ಆಗುತ್ತದೆ. ಇದರಲ್ಲಿ ಎಲ್ಲೋ ಗೋಲ್ ಮಾಲ್ ನಡೆದಿರುವ ಅನುಮಾನಗಳೂ ಜನರನ್ನು ಕಾಡತೊಡಗಿವೆ.

Exit mobile version