15 ದಿನದಲ್ಲಿ ಬಾಕಿ ತೆರಿಗೆ ವಸೂಲಿ ಮಾಡಿ : ನಗರಸಭೆಗೆ ಡಿಸಿ ಸೂಚನೆ

gadag muncipality

gadag muncipality



ಗದಗ : ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶಬಾಬು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ತೆರೆದ ಗುಂಡಿಗಳನ್ನು ತಕ್ಷಣವೇ ಮುಚ್ಚಲು ನಿರ್ದೇಶನ ನೀಡಿದರು.


ನಗರಸಭೆಯ ಸಿಬ್ಬಂದಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಯಾವುದೇ ಬಾಕಿ ಉಳಿಸಿಕೊಳ್ಳದೆ 10 ದಿನದೊಳಗಾಗಿ ನೀಡಬೇಕು.

ನಗರಸಭೆಯ ತೆರಿಗೆ ಒಳಪಡುವ ಹಾಗೂ ತೆರಿಗೆಯಿಂದ ಹೊರಗುಳಿದ ಎಲ್ಲ ಆಸ್ತಿಗಳ ಸರ್ವೆ ಮಾಡಿ ಬಾಕಿ ತೆರಿಗೆಯನ್ನು ವಸೂಲಿ ಮಾಡಲು 15 ದಿನಗಳ ಅವಧಿ ನಿಗದಿಪಡಿಸಿದ ಜಿಲ್ಲಾಧಿಕಾರಿಗಳು ತೆರಿಗೆ ವಿಭಾಗದ ಅಧಿಕಾರಿ ಸಿಬ್ಬಂದಿಗಳಿಗೆ ಗುರಿಯನ್ನು ನಿಗದಿಪಡಿಸಿದರು. ನಗರಸಭೆಯ ನಿರ್ವಹಣೆಗೆ ತೆರಿಗೆ ಮುಖ್ಯ ಆದಾಯವಾಗಿದ್ದು ಮಳಿಗೆಗಳ ಬಾಡಿಗೆಯ ಬಾಕಿ ಮೊತ್ತವನ್ನು ಹಾಗೂ ಪ್ರಸಕ್ತ ಸಾಲಿನ ತೆರಿಗೆಯನ್ನು, ನೀರಿನ ಬಾಕಿ ತೆರಿಗೆ ಹಾಗೂ ಟ್ರೇಡ ಲೈಸನ್ಸ್ ಸಂಬ0ದಿಸಿದ ತೆರಿಗೆಗಳನ್ನು ಬರುವ ಅಗಸ್ಟ 15ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಬೇಕು. ಈ ವರೆಗೂ ಟ್ರೇಡ್ ಲೈಸನ್ಸ್ ಪಡೆಯದ ವ್ಯಾಪಾರಸ್ಥರನ್ನು ಗುರುತಿಸಿ ತೆರಿಗೆ ವ್ಯಾಪ್ತಿಯಲ್ಲಿ ತರಬೇಕು. ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಿಗೆ ಸಂಬ0ದಿಸಿದ0ತೆ ಪ್ರತಿ ಮಾಹೆ 2 ಕೋಟಿ ಬಾಕಿ ಉಳಿಸಿಕೊಂಡ ಮೊತ್ತವನ್ನು ವಸೂಲಿ ಮಾಡಲು ಹಾಗೂ ಬಡ್ಡಿ ರಹಿತ ಹಾಗೂ ತೆರಿಗೆಯಲ್ಲಿ ಶೇ 5% ರಷ್ಟು ವಿನಾಯಿತಿಯ ಸದಾವಕಾಶವಿರುವ ಆಸ್ತಿ ತೆರಿಗೆದಾರರು ಇದರ ಪ್ರಯೋಜನ ಪಡೆಯುವಂತೆ ವ್ಯಾಪಕ ಪ್ರಚಾರ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.


ವಸತಿ ಯೋಜನೆಯ ಪ್ರಗತಿ ಪರಿಶೀಲನೆ ಮಾಡಿದ ಜಿಲ್ಲಾಧೀಕಾರಿ ಜಿ.ಪಿ.ಎಸ್ ಮತ್ತು ಎಮ್.ಐ.ಎಸ್ ಪ್ರಕ್ರಿಯೆವನ್ನು ಪೂರ್ಣಗೊಳಿಸಬೇಕು. ನಗರಸಭೆಯ ಎಲ್ಲ ದಾಖಲೆಗಳನ್ನು ವರ್ಗಿಕರಣಗೊಳಿಸಿ ಅವುಗಳ ಸರಿಯಾದ ನಿರ್ವಹಣೆಗೆ ಕ್ರಮ ಜರುಗಿಸಬೇಕು. ನಗರಸಭೆಯ ಅಧಿಕಾರಿ ಸಿಬ್ಬಂದಿಗಳಿಗೆ ಸಭೆಯಲ್ಲಿ ನಿಗದಿಪಡಿಸಲಾದ ಗುರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಮುಂದಿನ ಪ್ರಗತಿ ಪರಿಶೀಲನೆಯಲ್ಲಿ ಗುರಿ ನಿರ್ವಹಣಾ ವರದಿ ನೀಡಲು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೆಶಕ ಎಸ್. ಎನ್. ರುದ್ರೇಶ ಪೌರಾಯುಕ್ತ ಮನ್ಸೂರಅಲಿ ಮತ್ತು ನಗರಸಭೆ ಅಧಿಕಾರಿ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Exit mobile version