ಕೋವಿಡ್ ನಿಯಮ ಉಲ್ಲಂಘಿಸಿ ಬರ್ತ್ ಡೇ ಪಾರ್ಟಿ: ಶ್ರೀರಾಮುಲು ಆಪ್ತನಿಗೆ ಬಿಜೆಪಿ ಗೇಟ್ಪಾಸ್

birthday gadag lokdown

ಕೋವಿಡ್ ನಿಯಮ ಉಲ್ಲಂಘಿಸಿ ಸಚಿವ ಶ್ರೀರಾಮುಲು ಆಪ್ತ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಕೋವಿಡ್ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ ಆಚರಿಸಿಕೊಂಡಿದ್ದ ಶ್ರೀರಾಮುಲು ಆಪ್ತ ಎಚ್.ಎಸ್. ಶಿವನಗೌಡರನ್ನು ಜಿಲ್ಲಾ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಪೊಲೀಸರು ಪಾರ್ಟಿ ಕುರಿತಂತೆ  ಕೋರ್ಟಿನಲ್ಲಿ ಸ್ವಯಂ ದೂರು ದಾಖಲಿಸಿದ್ದು ಇಂದು ಸೋಮವಾರ ಶಿವನಗೌಡರು ಕೋರ್ಟಿಗೆ ಹಾಜರಾಗಬಹುದು ಎನ್ನಲಾಗಿದೆ.

ಗದಗ:  ಮದುವೆಗೆ ಅನುಮತಿ ಕೊಡುವಾಗಲೂ ಇಂತಿಷ್ಟೇ ಜನ ಇರಬೇಕೆಂದು ನಿಗದಿಗೊಳಿಸಿ ಷರತ್ತುಬದ್ಧ ಅನುಮತಿ ನೀಡಲಾಗುತ್ತಿದೆ. ಕೋರೊನಾ ಸೋಂಕು ನಿಯಂತ್ರಣಕ್ಕೆ ಅದು ಅಗತ್ಯವೂ ಹೌದು. ಆದರೆ, ರಾಜಕಾರಣಿಗಳು ಅಲ್ಲಲ್ಲಿ ಪಾರ್ಟಿ-ಆಚರಣೆ  ಮಾಡಿದ ವಿಡಿಯೋಗಳು ವೈರಲ್ ಆಗುತ್ತಲೇ ಬಂದಿದ್ದವು.

ಕಳೆದ  ಶುಕ್ರವಾರ ಜುಲೈ 10ರಂದು ನಗರದ ಶ್ರೀನಿವಾಸ ಭವನದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಶಿವನಗೌಡರು ಕೋವಿಡ್ ಸಂದರ್ಭದ 144 ಕಲಂ ಉಲ್ಲಂಘಿಸಿ ಭರ್ಜರಿ ಪಾರ್ಟಿ ನಡೆಸಿದ್ದರು. ಇದರ ವಿಡಿಯೋ ಟಿವಿ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಬಿಜೆಪಿ ಶಿವನಗೌಡರ ಮೇಲೆ ಕ್ರಮ ಕೈಗೊಂಡಿದೆ.

ರಾಜ್ಯ ಬಿಜೆಪಿಯ ಆದೇಶದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟರ್ ಅವರು ಶಿವನಗೌಡ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.

ಹುಟ್ಟುಹಬ್ಬ ಆಚರಣೆಗೆ ಯಾವುದೇ ಅನುಮತಿ ಪಡೆಯದೇ 144 ಕಲಂ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆಯ  ಐಪಿಸಿ  ಕಲಂ 188ರ ಅಡಿಯಲ್ಲಿ  ಕೋರ್ಟಿಗೆ ಸ್ವಯಂ ದೂರು ದಾಖಲಿಸಿದ್ದರು. ಭಾನುವಾರ ಕೋರ್ಟ್ ರಜೆ ಇದ್ದ ಕಾರಣ ಇಂದು ಸೋಮವಾರ ಶಿವನಗೌಡರನ್ನು ವಿಚಾರಣೆಗೆ ಕರೆಯಬಹುದು ಎನ್ನಲಾಗಿದೆ.

 ಈ ವಿಚಾರಕ್ಕೆ ಸಂಬಂಧಿಸಿದಂತೆ 6 ಜನ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಗದಗ ಎಸ್.ಪಿ ಎನ್.ಯತೀಶ್ ತಿಳಿಸಿದ್ದಾರೆ. ಇತ್ತಿಚೆಗಷ್ಟೆ ಅದ್ಧುರಿ ಮೆರವಣಿಗೆಯೊಂದರಲ್ಲಿ ಭಾಗವಹಿಸಿ ಸ್ವತಃ ಆರೋಗ್ಯ ಸಚಿವರೇ ಕೋವಿಡ್ ನಿಮಯ ಉಲ್ಲಂಘನೆಯ ಆರೋಪಕ್ಕೆ ಗುರಿಯಾಗಿದ್ದರು. ಆದರೆ ಇದೀಗ ಅವರ ಆಪ್ತನಿಂದ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ.

Exit mobile version