ಕಳೆದ ಎರಡು ದಿನಗಳಿಂದ ರಾಜಸ್ತಾನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ತಮಗೆ ಬಿಜೆಪಿ ದೊಡ್ಡ ಆಫರ್ ನೀಡಿತ್ತು ಎಂದು 20 ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಭಾನುವಾರ ಮದ್ಯಾಹ್ನದ ಹೊತ್ತಿಗೆ ಡಿಸಿಎಂ ಸಚೀನ್ ಪೈಲಟ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿರುವುದು ಕುತೂಹಲ ಹೆಚ್ಚಿಸಿದೆ.
ಜೈಪುರ: ಮಧ್ಯಪ್ರದೇಶದಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ರಾಜಕೀಯ ಕಳ್ಳಾಟಗಳನ್ನು ನೆನಪಿಗೆ ತರುವ ಘಟನೆಗಳು ಈ ಎರಡು ದಿನದಲ್ಲಿ ರಾಜಸ್ತಾನದಲ್ಲಿ ಕಾಣಿಸಿಕೊಂಡಿವೆ. ಆಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿತ್ತು.
ಈಗ ರಾಜಸ್ತಾನದ ಬೆಳವಣಿಗೆಗಳು ಕೂಡ ಮಧ್ಯಪ್ರದೇಶದ ಅಂದಿನ ಚಟುವಟಿಕೆಗಳನ್ನು ಹೋಲುತ್ತಿವೆ. ಅಲ್ಲಿ ಸಿಎಂ ಅವಕಾಶ ತಪ್ಪಿತೆಂದು ಬೇಸರಗೊಂಡಿದ್ದ ಕಾಂಗ್ರೆಸ್ ಯುವನಾಯಕ ಜ್ಯೋತಿರಾಧ್ಯ ಸಿಂಧ್ಯಾ ಮತ್ತು ಅವರ ಬೆಂಬಲಿಗ ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಗೇಮ್ ಆಡಿತ್ತು. ಈಗ ರಾಜಸ್ತಾನದಲ್ಲೂ ಸಿಎಂ ಹುದ್ದೆ ಬಯಸಿ ನಿರಾಶರಾಗಿರುವ ಡಿಸಿಎಂ, ಕಾಂಗ್ರೆಸ್ಸಿನ ಇನ್ನೊಬ್ಬ ಯುವನಾಯಕ ಸಚಿನ್ ಪೈಲಟ್ ಅವರಿಗೆ ಬಿಜೆಪಿ ಗಾಳ ಹಾಕಿದೆಯೇ ಎಂಬ ಅನುಮಾನ ಶುರುವಾಗಿವೆ. ಏಕೆಂದರೆ, ಬಿಜೆಪಿ ತಮಗೆ ಆಫರ್ ನೀಡಿತ್ತು ಎಂದು ಆರೋಪಿಸಿದ 20 ಶಾಸಕರಲ್ಲಿ ಬಹುತೇಕರು ಸಚಿನ್ ಪೈಲಟ್ ಬೆಂಬಲಿಗರಾಗಿದ್ದಾರೆ.
ಸೀನಿಯರ್ V/s ಜೂನಿಯರ್
ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲಟ್ ನಡುವಿನ ಬಿರುಕು ಹೆಚ್ಚುತ್ತಲೇ ನಡೆದಿದೆ. ಈಗದು ಅವರಿಬ್ಬರ ನಡುವಿನ ವಯಸ್ಸಿನ ಅಂತರದಷ್ಟೇ ವಿಶಾಲವಾಗಿದೆ. 2018ರ ಅಂತ್ಯದಲ್ಲಿ ರಾಜಸ್ತಾನದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮೊದಲೇ ಈ ಇಬ್ಬರ ನಡುವೆ ವೈಮನಸ್ಸು ಮೂಡಿ ಎರಡು ಗುಂಪುಗಳಾಗಿದ್ದವು. ಟಿಕೆಟ್ ಹಂಚಿಕೆ ವೇಳೆಯೂ ಇಬ್ಬರೂ ಜಿದ್ದಾಜಿದ್ದಿಗೆ ಬಿದ್ದಿದ್ದರು. ಕಾಂಗ್ರೆಸ್ ಗೆದ್ದ ಮೇಲೆ ಸಚಿನ್ ಪೈಲಟ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್ ಹಿರಿಯ ಗೆಹ್ಲೋಟ್ ಅವರಿಗೆ 3ನೆ ಬಾರಿ ಸಿಎಂ ಆಗುವ ಅವಕಾಶ ನೀಡಿತು.
2013ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಸಚಿನ್ ಪೈಲಟ್ ಪಕ್ಷ ಸಂಘಟನೆ ಚುರುಕುಗೊಳಿಸಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಖಾತೆ ಹಂಚಿಕೆಯಲ್ಲೂ ಗೆಹ್ಲೋಟ್ ಮತ್ತು ಪೈಲಟ್ ಬಣಗಳ ನಡುವೆ ಸಮಸ್ಯೆಯಾಗಿತ್ತು. ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲೂ ಈ ಭಿನ್ನಮತ ಕಾಣಿಸಿತ್ತು.
ಬಿಜೆಪಿ ಎಂಟ್ರಿ
ಮೊದಲಿನಿಂದಲೂ ರಾಜಸ್ತಾನದಲ್ಲಿ ಸರ್ಕಾರ ರಚಿಸಲು ತುದಿಗಾಲ ಮೇಲೆ ಕಾಯುತ್ತಿರುವ ಬಿಜೆಪಿ, ಗೆಹ್ಲೋಟ್ ಮತ್ತು ಪೈಲಟ್ ನಡುವಿನ ಲಾಭ ಪಡೆದು ಕಾಂಗ್ರೆಸ್ಸಿನ ಹಲವು ಶಾಸಕರ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾಧ್ಯ ಸಿಂಧ್ಯಾರನ್ನು ಬಳಸಿಕೊಂಡಂತೆ, ಇಲ್ಲಿ ಸಚಿನ್ ಪೈಲಟ್ ಅವರಿಗೆ ಬಿಜೆಪಿ ಗಾಳ ಹಾಕಿದ ಸಂಶಯ ಎದ್ದಿದೆ. ಸೀಂಧ್ಯಾರಂತೆ ಪೈಲಟ್ ದುಡುಕುವ ಯುವಕನಲ್ಲ, ಆದರೆ ರಾಜಕೀಯದಲ್ಲಿ ಏನೂ ಹೇಳಲಿಕ್ಕೆ ಆಗುವುದಿಲ್ಲ. ಸದ್ಯ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದ್ದು 12 ಪಕ್ಷೇತರರು ಮತ್ತು ಇತರ ಪಕ್ಷಗಳ 5 ಶಾಸಕರು ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ.