ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಬರಗೂರರ ಅಮೃತಮತಿ ಆಯ್ಕೆ

amruthamathi baragooru ramachandrappa

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಚಿತ್ರ ಅಮೃತಮತಿ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.

ಅಮೃತಮತಿ ಚಿತ್ರವು ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತ ಆಯ್ಕೆಯಾಗಿ ಪ್ರದರ್ಶನಗೊಳ್ಳಲಿದೆ. ಕೊರೊನಾ ಕಾರಣದಿಂದ ಈ ಚಿತ್ರೋತ್ಸವ ಆನ್‌ಲೈನ್ ಮೂಲಕ ಜುಲೈ 29ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಈ ಚಿತ್ರ ಎಲ್ಲ ವಿಭಾಗಗಳ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದೆ ಎಂದು ಚಿತ್ರದ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

‘ಅಮೃತಮತಿ’ ಚಿತ್ರವು 13ನೇ ಶತಮಾನದಲ್ಲಿ ಕನ್ನಡದ ಖ್ಯಾತ ಕವಿ ಜನ್ನ ಬರೆದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಮೂಲ ಕಥಾವಸ್ತುವನ್ನು ಮರು ವ್ಯಾಖ್ಯಾನ ಮಾಡಿ ಮರುಸೃಷ್ಟಿ ಮಾಡಲಾಗಿದೆ.

ಹದಿಮೂರನೇ ಶತಮಾನದಲ್ಲಿ ಜನ್ನ ರಚಿಸಿರುವ ಯಶೋಧರ ಚರಿತೆ ಕೃತಿ ಆಧರಿಸಿ ಈ ಚಿತ್ರವನ್ನು ತೆರೆಗೆ ತರಲಾಗಿದೆ. ಇದೇ ಕೃತಿಯನ್ನು ಆಧರಿಸಿ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಹಿಟ್ಟಿನಹುಂಜ ನಾಟಕ ಕೃತಿಯನ್ನು ರಚಿಸಿದ್ದಾರೆ.

ಚಿತ್ರ  ಅಟ್ಲಾಂಟ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಬರಗೂರು ರಾಮಚಂದ್ರಪ್ಪ, “ಪ್ರಾಚೀನ ಕನ್ನಡ ಕಾವ್ಯವೊಂದರ ಸಿನಿಮಾ ರೂಪವು ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾಕಣಕ್ಕೆ ಅಧಿಕೃತವಾಗಿ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯ ಮತ್ತು ಸಿನಿಮಾ – ಎರಡೂ ಕ್ಷೇತ್ರಗಳಿಗೆ ಸಂದ ಮನ್ನಣೆ” ಎಂದಿದ್ದಾರೆ.

‘ಅಮೃತಮತಿ’ ಪಾತ್ರದಲ್ಲಿ ಖ್ಯಾತ ನಟಿ ಹರಿಪ್ರಿಯಾ ಅಭಿನಯಿಸಿದ್ದು, ಅವರಿಗೆ ‘ನೋಯ್ಡಾ ವಿಶ್ವ ಚಿತ್ರೋತ್ಸವ’ದಲ್ಲಿ ಈ ಪಾತ್ರಾಭಿನಯ ಕ್ಕೆ `ಶ್ರೇಷ್ಠ ನಟಿ’ ಪ್ರಶಸ್ತಿ ಬಂದಿದೆ.

ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದು, ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್ ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮೀನಾರಾಯಣ್ ತಾರಾಗಣದಲ್ಲಿದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಅಮೃತಮತಿ ಚಿತ್ರಕ್ಕಿದೆ.

ಈ ಚಿತ್ರ ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರರ ‘ಅಮೃತಮತಿ’ ಆಯ್ಕೆಯಾಗಿದ್ದು ಇದೀಗ ಎರಡನೇ ಚಿತ್ರೋತ್ಸವಕ್ಕೆ ಆಯ್ಕೆಯಾದಂತಾಗಿದೆ.

Exit mobile version