ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಾಳೆ ಕರ್ಫ್ಯೂ ಜಾರಿಯಲ್ಲಿದೆ. ಆದರೆ, ಜನರು ಹೆದರಿ ತಮ್ಮ ಊರಿನತ್ತ ಮತ್ತೆ ಕಾಲು ಕೀಳುತ್ತಿದ್ದಾರೆ.
ಬೆಂಗಳೂರಿಗೆ ದುಡಿಯುವುದಕ್ಕಾಗಿ ವಲಸೆ ಬಂದಿದ್ದ ಜನರು ಮತ್ತೆ ಲಾಕ್ ಡೌನ್ ಆಗಬಹುದು ಎಂಬ ಭಯದಿಂದ ಮತ್ತೆ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಅನೇಕರು ಗಂಟು ಮೂಟೆ ಕಟ್ಟಿಕೊಂಡು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನವಯುಗ ಟೋಲ್ ಬಳಿ ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಮನೆಯ ಪಾತ್ರೆ, ಸಾಮಾನುಗಳು ಮತ್ತು ಪೀಠೋಪಕರಣಗಳ ಸಮೇತ ಗುಂಪು ಗುಂಪಾಗಿ ಜನರು ತೆರಳುತ್ತಿದ್ದಾರೆ. ತುಮಕೂರು ರಸ್ತೆ ಮಾತ್ರವಲ್ಲದೇ ಮೈಸೂರು ರಸ್ತೆಯಲ್ಲಿಯೂ ಟ್ರಾಫಿಕ್ ಜಾಮ್ ಆಗಿದೆ. ಸಾಲು ಸಾಲಾಗಿ ವಾಹನಗಳು ನಿಂತಿವೆ.
ಕೊರೊನಾ ನಿಯಂತ್ರಣಕ್ಕಾಗಿ ಇಂದು ರಾತ್ರಿ 8 ಗಂಟೆಯಿಂದ ಭಾನುವಾರ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿಯಿಂದ ಸೋಮವಾರ ಬೆಳಿಗ್ಗೆ 5ರ ವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ. ತುರ್ತು, ಅಗತ್ಯಸೇವೆ ಹೊರತುಪಡಿಸಿ ಉಳಿದ ಕ್ಷೇತ್ರಗಳು, ವ್ಯಾಪಾರ – ವಹಿವಾಟು ಬಂದ್ ಆಗಿರಲಿದೆ.
ನಗರದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಕೂಡ ಮತ್ತೆ ಲಾಕ್ಡೌೋನ್ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿದಿವೆ. ಹೀಗಾಗಿ ಸೋಮವಾರದಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಆಗಬಹುದು ಎಂದು ಎಲ್ಲರೂ ತಮ್ಮ ಊರುಗಳಿಗೆ ಹೊರಟಿದ್ದಾರೆ.