ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್..!

ಗಂಗಾವತಿ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಈ ಘಟನೆ ಕಾರಟಗಿಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿದ್ಯಾರ್ಥಿನಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದಾಗಿ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಆತಂಕ ಶುರುವಾಗಿದೆ.

ಕಾರಟಗಿಯ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಸೋಂಕಿತೆ ಕಳೆದ ಎರಡು ಪರೀಕ್ಷೆಗಳನ್ನು ಎಲ್ಲರಂತೆ ಸಾಮೂಹಿಕವಾಗಿ ಖಾಸಗಿ ಶಾಲೆಯ ರೂಂನಲ್ಲಿ ಬರೆದಿದ್ದಳು. ಬುಧವಾರ ಕೂಡ ಅದೇ ರೀತಿ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಸೋಂಕು ದೃಢಪಟ್ಟ ರಿಪೋರ್ಟ್ ಬಂದಿದೆ.

ವರದಿ ಬರುತ್ತಿದ್ದಂತೆ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತಾದರೂ ಸೋಂಕಿನಿಂದ ಭಯಭೀತಳಾದ ವಿದ್ಯಾರ್ಥಿನಿ ಪರೀಕ್ಷೆ ಅರ್ಧಕ್ಕೆ ನಿಲ್ಲಿಸಿ ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗೆ ತೆರಳಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೂಲಿ ಅರಸಿ ತೆರಳಿದ್ದ ತಂದೆ ತಾಯಿ ಜೊತೆ ತೆರಳಿದ್ದ ವಿದ್ಯಾರ್ಥಿನಿ, ಪರೀಕ್ಷೆ ಇದ್ದುದರಿಂದ ಕಾರಟಗಿಯ ತಮ್ಮ ನಿವಾಸಕ್ಕೆ ಬಾರದೆ ಸಿಂಧನೂರಿನಲ್ಲಿನ ಅವರ ಚಿಕ್ಕಮ್ಮಳ ಮನೆಯಲ್ಲಿ ಉಳಿದಿದ್ದಳು. ಅಲ್ಲಿಂದ ಪರೀಕ್ಷೆಗೆ ಬರುತ್ತಿದ್ದಳು.

ಬೆಂಗಳೂರಿನಿಂದ ಬಂದಿದ್ದ ವಿದ್ಯಾರ್ಥಿನಿಯ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಈ ವಿಷಯವನ್ನ ಪರೀಕ್ಷಾ ಕೇಂದ್ರದಲ್ಲಿ ಹೇಳದೆ ಇರುವುದರಿಂದಾಗಿ ಈ ಅವಘಡ ಸಂಭವಿಸಿದೆ. ಈ ವಿದ್ಯಾರ್ಥಿನಿ ಸಂಪರ್ಕ ಬಂದಿರುವ 18 ಜನ ವಿದ್ಯಾರ್ಥಿಗಳು, 4 ಜನ‌ ರೂಂ ಸೂಪರ್‌ವೈಜರ್‌ ಗಳನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಕೊಪ್ಪಳ ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಮಾಹಿತಿ ನೀಡಿದರು.

Exit mobile version