ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳು ಪಾರದರ್ಶಕವಾಗಿಲ್ಲ. ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ ಆತಂಕ ಅಸುರಕ್ಷತೆ, ಅಭದ್ರತೆಯಲ್ಲಿರುವ ಜನರಲ್ಲಿ ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

ಈ ಕುರಿತು ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇದರಲ್ಲಿ ಕ್ವಾರಂಟೈನ್, ಚಿಕಿತ್ಸೆ, ಪಿಪಿಇ, ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆ ಮತ್ತು ಚಿಕಿತ್ಸೆಗೆ ಖರ್ಚಾದ ಹಣ ಎಷ್ಟು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬಂದಿರುವ ದುಡ್ಡು ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಯಾವ ಮಾನದಂಡದ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿಪಡಿಸಿದೆ? – ಈ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು..?
ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ವಿವರ ಕೇಳಿ ನಾನು ಹಲವಾರು ಪತ್ರಗಳನ್ನು ಬರೆದಿದ್ದರೂ ಕರ್ನಾಟಕ ಸಿಎಂ ಮಾಹಿತಿ ಕೊಡುತ್ತಿಲ್ಲ. ಮಾಹಿತಿ ನಿರಾಕರಣೆ ನನ್ನ ಹಕ್ಕು ಚ್ಯುತಿಯಾಗುವುದು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 23ರಂದು ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದಾಗ ರಾಜ್ಯದಲ್ಲಿ ಸಾವು ಸಂಭವಿಸಿರಲಿಲ್ಲ, 26 ಮಂದಿ ಸೋಂಕಿತರಷ್ಟೇ ಇದ್ದರು. ಇಂದಿನ ವರದಿಯ ಪ್ರಕಾರ ಸೋಂಕಿತರ ಸಂಖ್ಯೆ 11,923, ಸಾವಿನ ಸಂಖ್ಯೆ 191 ದಾಟಿದೆ. ಎಲ್ಲಿದೆ ನಿಯಂತ್ರಣ? ಎಂದು ಅವರು ಪ್ರಶ್ನಿಸಿದ್ದಾರೆ.

ಸಿಎಂ ನಿಷ್ಕ್ರಿಯತೆ..!
ಕೊರೊನಾ ದಿಢೀರನೇ ಬಂದೆರಗಿಲ್ಲ, ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್‌ಡೌನ್ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ಕರ್ನಾಟಕ ಸಿಎಂ, ಯಾವ ತಯಾರಿಯನ್ನೂ ನಡೆಸಿಲ್ಲ. ಈ ನಿಷ್ಕ್ರಿಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರ ಒಪ್ಪಿಕೊಂಡಿರುವ ಚಿಕಿತ್ಸಾ ಶುಲ್ಕಕ್ಕೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಅವರನ್ನು ಕರ್ನಾಟಕ ಸಿಎಂ ಒಪ್ಪಿಸಬೇಕು, ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಎರಡನ್ನೂ ಮಾಡದೆ ಕೈಕಟ್ಟಿ ಕುಳಿತರೆ ಜನರೇನು ಮಾಡಬೇಕು? ಎಂದು ಅವರು ಪಶ್ನಿಸಿದ್ದಾರೆ.

ಕೊರೊಮಾ ಪರೀಕ್ಷೆಯಲ್ಲಿ ಇಳಿಕೆ.!
ಕೊರೊನಾ ಸೋಂಕು ನಗರ-ಪಟ್ಟಣಗಳಿಂದ ಹಳ್ಳಿಗಳಿಗೆ ಹರಡಿದೆ. ಆದರೆ ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11,000ಕ್ಕೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ. ಏನಾಗಿದೆ ಸರ್ಕಾರಕ್ಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವೆಂಟಿಲೇಟರ್ ಗಳ ಕೊರತೆ ಇದೆ.!
ರಾಜ್ಯಕ್ಕೆ 9,200 ವೆಂಟಿಲೇಟರ್ ಬೇಕಾಗಿವೆ. ಇರುವುದು 1,500 ಮಾತ್ರ. ಕೇಂದ್ರ ಸರ್ಕಾರಕ್ಕೆ 33,000 ವೆಂಟಿಲೇಟರ್ ಕಳಿಸಲು ಕೇಳಿದರೆ ಬಂದಿರುವುದು 90 ಮಾತ್ರ. 20,000 ಆಕ್ಸಿಜನೇಟೆಡ್ ವೆಂಟಿಲೇಟರ್ ಬೇಕಾಗಿದ್ದು, ಕೇವಲ 7000 ಮಾತ್ರ ಇವೆ. ಇದೆನಾ ತಯಾರಿ? ಎಂದಿದ್ದಾರೆ.

ವೈದ್ಯಕೀಯ ಸಲಕರಣೆಗಳ ಖರೀದಿ ಬಗ್ಗೆ ಸ್ಪಷ್ಟನೆ ನೀಡಿ..
ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಂದಾಜು 3,300 ಕೋಟಿ ರೂ.ಗಳ ಅವ್ಯವಹಾರ ನಡೆದಿದ್ದು, ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಆರ್ಥಿಕ ಇಲಾಖೆ ಆಕ್ಷೇಪಿಸಿದೆ. ಈ ಬಗ್ಗೆ ಕರ್ನಾಟಕ ಸಿಎಂ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಶ್ವೇತಪತ್ರ ಹೊರಡಿಸಿ..
ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಕರ್ನಾಟಕ ಸಿಎಂ ತಕ್ಷಣ ಶ್ವೇತಪತ್ರ ಹೊರಡಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನತೆ -ಉಡಾಫೆತನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಹಣ್ಣು ಮಾರಲು ಬಂದವರಿಗೆ ಕಲ್ಲು ತಗೊಂಡು ಓಡಿಸಿ: ಹಾವೇರಿಯಲ್ಲಿ ಡಂಗೂರ

ಕೇಳ್ರಪ್ಪೋ ಕೇಳ್ರಿ……… ಆ ಊರಿಂದ ಯಾರಾದ್ರು ಹಣ್ಣು ತರಕಾರಿ ಮಾರೋರ ಬಂದ್ರ ಕಲ್ಲು ತಗೊಂಡು ಓಡಿಸುವಂತೆ ಡಂಗೂರ.

ರಾಜ್ಯಕ್ಕೆ ಮಾದರಿಯಾದ ಜಿಲ್ಲಾ ಸಾಹಿತ್ಯ ಭವನ

ಜಿಲ್ಲೆಯಲ್ಲಿ ನಿರ್ಮಿಸಿರುವ ಕನ್ನಡ ಸಾಹಿತ್ಯ ಭವನವನ್ನು ರಾಜ್ಯದಲ್ಲಿಯೇ ಮಾದರಿ ಭವನವಾಗಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶರಣು ಗೋಗೇರಿ ಹೇಳಿದರು.

ಸಿದ್ಧರಾಮಯ್ಯ ಗೆ ಅಹಿಂದ ಮತದಾರರ ಬೆಂಬಲ

ಉತ್ತರಪ್ರಭ ಸುದ್ದಿ ಬಸವನಬಾಗೇವಾಡಿ: ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ…

ರೋಣದಲ್ಲಿ ಹೋರಾಟದ ವೇಳೆ ಹೆಜ್ಜೇನು ದಾಳಿ

ಆಸರೆ ಮನೆಗಳ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿರುವ ವೇಳೆ ಹೆಜ್ಜೇನು ಹುಳುಗಳ ದಾಳಿ ಮಾಡಿದ ಘಟನೆ ನಡೆದಿದೆ.