ಗದಗ ಜಿಲ್ಲೆಯಲ್ಲಿ ಬೀಗರ ಬುತ್ತಿಯಿಂದ ಕೊರೊನಾ ಭಯ..!

covid-19

corona

ಗದಗ: ಕೊರೊನಾ ಹೆಮ್ಮಾರಿ ಪ್ಯಾಟ್ಯಾಗಷ್ಟ ಗಿರಿಕಿ ಹೊಡೆಯುತ್ತಿತ್ತ. ಈಗ ಹಳ್ಳಿಗೂ ಬಂದು ಹಳ್ಳಿ ಜನ್ರಿಗೆ ಹಳಹಳಿ ಶುರುಮಾಡೈತಿ. ಗದಗ ಜಿಲ್ಲಾದ್ ಈ ಊರಾಗ ಮದುವೆಗೆ ಹೋಗಿ ಮಂದಿ ಪಿಕಲಾಟಕ್ ಬಿದ್ದಂಗಾಗೈತಿ. ಕೊರೊನಾ ಹೆಸರ್ ಕೇಳಿದ್ರ ಸಾಕ್ ಜನ್ರಿಗೆ ಢವಢವ ಶುರುವಾಕ್ಕೈತಿ..! ಯಾರಿಂದ..? ಯಾವಾಗ..? ಹ್ಯಾಂಗ್ ಕೊರೊನಾ ಮಹಾಮಾರಿ ವಕ್ಕರಸ್ಕೊತೈತಿ ಅನ್ನೋದು ಗೊತ್ತಾಗದಂಗ ಆಗೈತಿ.

ಕೊರೊನಾ ನೆಲಿ ಸಿಗದ್ ಕಾರಣದಿಂದಾನ ಗದಗ ಜಿಲ್ಲೆ ಹೊಂಬಳದಾಗ ಜೂನ್ 17ಕ್ಕ ನಡೆದ ಮದುವಿಗೆ ಬಂದ್ ದಂಪತಿಯಿಂದ ಐದು ಜನರಿಗೆ ಕೊರೊನಾ ಪಾಸಿಟಿವ್ ಬಂದೈತಿ. ಆದ್ರ ಈಗ ಈ ಊರಾಗ ಬೀಗರ ಬುತ್ತಿದು ಭಯ ಶುರುವಾಗೈತಿ..! ಇದರಿಂದ ಇಡೀ ಊರಾಗ್ ಅಷ್ಟ ಅಲ್ದ್, ಬ್ಯಾರೆ ಊರಿಂದ ಮದುವಿಗೆ ಬಂದ್ ಮಂದಿಗೆ, ಬುತ್ತಿ ಉಂಡ್ ಜನಕ್ಕೆ ಕೊರೊನಾ ಭಯ ಶುರುವಾಗೈತ್ಯಂತ.

ಮದುವಿ ಆದ್ ಮ್ಯಾಲೆ ಈ ಮನಿಯವ್ರು ಊರಾಗಿನ ಮನಿಮನಿಗೂ ಬೀಗರ ಬುತ್ತಿ ಹಂಚ್ಯಾರ. ಇವರಿಂದ ರೊಟ್ಟಿ ತಗೊಂಡಿರೋರ್ರಿಗೂ ಕೊರೊನಾ ಹೆಮ್ಮಾರಿ ರೊಟ್ಟಿ ಜೊತಿಗೆ ಎಲ್ಲಿ ತಮ್ಮ ಹೊಟ್ಟಿ ಸೇರೈತೋ ಅಂತ ಭಯ ಕಾಡಾಕತ್ತೈತಿ. ಹಿಂಗಾಗಿ ಹೊಂಬಳ ಜನ ಕೊರೊನಾ ಭಯದಲ್ಲಿ ಕಾಲ ಕಳಿಯುವಂಗಾಗೈತಿ. ಮುಂದ ನಮ್ ಸ್ಥತಿ ಹ್ಯಾಂಗ್ ಅನ್ನೋ ಚಿಂತಿಯೊಳಗದಾರ.

ಜೂನ್ 23ಕ್ಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ಥ್ ಬುಲಿಟಿನ್ ನ್ಯಾಗ ಹೊಂಬಳ ಗ್ರಾಮದ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. 32 ವರ್ಷದ ಮಹಿಳೆ ಪಿ-9403, 38 ವರ್ಷದ ಮಹಿಳೆ ಪಿ-9404 ಕೇಸ್ ಗಳಲ್ಲಿ ಪಾಸಿಟಿವ್ ಪತ್ತೆಯಾಗಿದ್ವು. ಇದರ ಮೂಲ ಹುಡಿಕಿದಾಗ ಗೊತ್ತಾಗಿದ್ದು, ಮದುವಿಗೆ ಬಂದ ಧಾರವಾಡ ಜಿಲ್ಲಾ ಮೊರಬದ ದಂಪತಿ (ಪಿ-8289 ಮತ್ತು ಪಿ-8290) ಅಂತ.

ಮೊರಬದ ದಂಪತಿ ಸಂಪರ್ಕದಿಂದ ಇಬ್ಬರಿಗೆ ಪಾಸಿಟ್ ಬಂದ್ರ, ಈ ಇಬ್ಬರಿಂದ ಮೂವರಿಗೆ ಸೋಂಕು ಕಂಡೈತಿ. ಪಿ-9403 ಸಂಪರ್ಕದಿಂದ 10 ವರ್ಷದ ಪಿ-9727 ಮತ್ತು 11 ವರ್ಷದ ಪಿ-9728 ಇಬ್ಬರಿಗೆ ಸೋಂಕು ಪಾಸಿಟಿವ್ ಕಂಡ ಬಂದೈತಿ. ಇನ್ನ ಪಿ-9404 ಸಂಪರ್ಕದಿಂದ 14 ವರ್ಷದ ಪಿ-9726 ಕೇಸ್ ಪತ್ತೆಯಾಗೈತಿ. ಒಟ್ಟು ಮದುವಿ ಮನಿಗೆ ಬಂದ್ ದಂಪತಿ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕ ದಿಂದ ಐದು ಮಂದಿಗೆ ಕೊರೊನಾ ಸೋಂಕು ತಗುಲೈತಿ ಅಂತಾ ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ಮಾಹಿತಿ ನೀಡೈತಿ.

Exit mobile version