ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಂಸ್ಥೆಯ ಮುಖ್ಯಸ್ಥರೆ ಹೊಣೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ತಂದೆ, ಪತ್ನಿ ಮತ್ತು ಪುತ್ರಿಗೆ ಕೊರೋನಾ ಸೋಂಕು ತಗುಲಿ ಸ್ವಯಂ ಗೃಹಬಂಧನದಲ್ಲಿರುವ ಸಚಿವರು ಮಂಗಳವಾರ ನಿವಾಸದಿಂದಲೇ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದದ ಮೂಲಕ ಕೋವಿಡ್‌ ಬೆಳವಣಿಗೆಗಳ ಪರಾಮರ್ಶೆ ನಡೆಸಿದರು.
ರೋಗಿಗಳನ್ನು ದಾಖಲು ಮಾಡಿಕೊಳ್ಳುವ ವಿಷಯದಲ್ಲಿ ಆಗುತ್ತಿರುವ ಗೊಂದಲಗಳು, ಕಳಪೆ ಆಹಾರ ವಿತರಣೆ ಮತ್ತು ಸ್ವಚ್ಛತೆ ಸರಿಯಿಲ್ಲದಿರುವುದಕ್ಕೆ ಸಂಬಂಧಿಸಿದಂತೆ ಎರಡು ಮೂರು ದಿನಗಳಿಂದ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಗಲು – ರಾತ್ರಿ ಎನ್ನದೆ ಕಷ್ಟಪಟ್ಟು ಎಲ್ಲರೂ ಕೆಲಸ ಮಾಡಿ, ಬೆಂಗಳೂರು ನಗರ ಮತ್ತು ರಾಜ್ಯದ ಬಗ್ಗೆ ದೇಶವೇ ಮೆಚ್ಚುವಂತಹ ಕೆಲಸ ಮಾಡಿದ್ದು ಈಗ ಇಂತಹ ದೂರುಗಳು ಬಂದರೆ ಸಹಿಸಲು ಆಗುವುದಿಲ್ಲ ಎಂದರು.

ಕೋವಿಡ್‌ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ರಾಜಿ ಪ್ರಶ್ನೆಯಿಲ್ಲ. ಇನ್ನು ಮುಂದೆ ದೂರು ಮರುಕಳಿಸದಂತೆ ಎಚ್ಚರವಹಿಸಬೇಕು. ಎಚ್ಚರಿಕೆಯಿಂದ ಕರ್ತವ್ಯ ನಿವ೯ಹಿಸುವಂತೆ ಸೂಚಿಸಿದ್ದರೂ, ಲೋಪಗಳು ಆಗುತ್ತಿದ್ದರೆ ನಿರ್ದೇಶಕರುಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕರುಗಳ ಜತೆ ಮಾತನಾಡಿ ಮಾಧ್ಯಮ ವರದಿಗಳ ಬಗ್ಗೆ ವಿವರಣೆ ಪಡೆದರು.

ಸಂಸ್ಥೆಯ ಮುಖ್ಯಸ್ಥರಿಗೆ ಇದು ಕೊನೆಯ ಎಚ್ಚರಿಕೆ. ಮುಂದೆ ಈ ರೀತಿ ಮಾತನಾಡುವುದಿಲ್ಲ, ಬದಲಿಗೆ ದೂರು ಬಂದ ಸಂಸ್ಥೆಗಳ ಹೊಣೆಯನ್ನು ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ವಹಿಸಲಾಗುವುದು. ಒಟ್ಟಾರೆ ವ್ಯವಸ್ಥೆ ಪಾರದರ್ಶಕವಾಗಿ ಗರಿಷ್ಠ ಬದ್ಧತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು.

ಇನ್ನು ಮುಂದೆ ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಕಳುಹಿಸಿ ನಿಗಾ ವ್ಯವಸ್ಥೆ ಮಾಡಬೇಕು. ರೋಗ ಲಕ್ಷಣಗಳಿದ್ದು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಮಾತ್ರವೇ ಕೋವಿಡ್‌ ಆಸ್ಪತ್ರೆಗಳಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಬೇಕು. ಇವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ನೀಡುವ ಜತೆಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಸ್ವಚ್ಛತೆ ವಿಷಯದಲ್ಲೂ ಎಚ್ಚರಿಕೆ ವಹಿಸಬೇಕು. ಆಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ಸರಬರಾಜುದಾರರಿಗೆ ನೀಡಬೇಕು. ಪ್ರಮಾಣ ಹೆಚ್ಚು ನೀಡಿದರೂ ಪರವಾಯಿಲ್ಲ. ಹೆಚ್ಚುವರಿ ಹಣವನ್ನು ಸರ್ಕಾರ ಭರಿಸಲು ಸಿದ್ಧ ಎಂದರು.

ಚಿಕಿತ್ಸೆ ನೀಡಲು ತಜ್ಞ ಮತ್ತು ಹಿರಿಯ ವೈದ್ಯರು ಬರುತ್ತಿಲ್ಲ ಎಂಬ ದೂರುಗಳಿವೆ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ತಜ್ಞರು, ವೈದ್ಯರು ಮತ್ತು ಪಿಜಿ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಾರ್ಡ್, ಐಸಿಯು ಮುಂದೆ ಪ್ರಕಟಣಾ ಫಲಕದಲ್ಲಿ ಹಾಕಬೇಕು. ಜತೆಗೆ ಕ್ಯಾಮೆರಾ ಅಳವಡಿಸಿ ಕರ್ತವ್ಯಕ್ಕೆ ಹಾಜರಾಗುವವರು ತಮ್ಮ ಹೆಸರು ಹೇಳಿ ಒಳ ಹೋಗಬೇಕು. ಒಳಗೆ ಮತ್ತು ಹೊರಗೆ ಹೋಗುವ ಮುನ್ನ ಕಡ್ಡಾಯವಾಗಿ ಸಮಯ ನಮೂದಿಸಿ ಸಹಿ ಮಾಡಲೇಬೇಕು. ಈ ವ್ಯವಸ್ಥೆ ಬುಧವಾರದಿಂದಲೇ ಎಲ್ಲ ಕೋವಿಡ್‌ ಆಸ್ಪತ್ರೆಗಳಲ್ಲಿ ಜಾರಿಯಾಗಬೇಕು ಎಂದು ಸೂಚನೆ ನೀಡಿದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳನ್ನು ಮೀಸಲು ಇರಿಸಲಾಗಿದೆ. ಅದನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕೋವಿಡ್‌ ಕೇರ್‌ ಸೆಂಟರ್‌ಗಳು, ಅಲ್ಲಿ ನೀಡುವ ಸೌಲಭ್ಯಗಳಲ್ಲೂ ಲೋಪಗಳಾಗದಂತೆ ನೋಡಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗಳಿಂದ ಆಂಬ್ಯುಲೆನ್ಸ್‌ ಅಥವಾ ಸರಕಾರಿ ಬಸ್‌ಗಳ ಮೂಲಕ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು ಎಂದು ಸಚಿವ ಸುಧಾಕರ್‌ ಸಲಹೆ ನೀಡಿದರು.

ಕೋವಿಡ್‌ ಕಾರ್ಯ ಚಟುವಟಿಕೆಗಳಿಗೆ ನೀಯೋಜನೆಗೊಂಡಿರುವ ಹಿರಿಯ ಅಧಿಕಾರಿಗಳು ಮತ್ತು ಕೋವಿಡ್‌ ಆಸ್ಪತ್ರೆ ಮುಖ್ಯಸ್ಥರು, ಕಾರ್ಯದರ್ಶಿ, ಅಪರ ಮುಖ್ಯಕಾರ್ಯದರ್ಶಿಯರೊಂದಿಗೆ ಸಮನ್ವಯ ಇಟ್ಟುಕೊಂಡು ಆಯಾ ದಿನದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಸೂಚನೆಗಳನ್ನು ಪಾಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ರೋಗ ಲಕ್ಷಣಗಳು ಇಲ್ಲದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲು ಮಾಡುವ ಮತ್ತು ನಿಗಾ ವಹಿಸುವುದಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

Exit mobile version