ಊರಳಿಯನಿಂದ ಬಂತು ಸೋಂಕು: ಆರ್.ಎಂ.ಪಿ ಡಾಕ್ಟರ್ ನಿಂದ ಸುತ್ತಲಿನ ಗ್ರಾಮಸ್ಥರಿಗೆ ಆತಂಕ..!

corona gadag

corona gadag details

ಗದಗ: ಊರಳಿಯ ಮಾವನ ಮನೆಗೆ ಬಂದಿದ್ದಾನೆ. ಆದರೆ ಆತನಿಗೆ ಸೋಂಕು ತಗುಲಿರುವುದು ಸ್ವತ: ಆತನಿಗೂ ಗೊತ್ತಿರಲಿಲ್ಲ. ಮಡಿದಿಯನ್ನು ಮಾವನ ಮನೆಗೆ ಬಿಟ್ಟು ಹೋಗಲು ಬಂದ ಅಳಿಯನಿಗೆ ಮಾವನೂರಿಗೆ ಬಂದು ಹೋದ ಮೇಲೆ ಆತನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನು ಈತನ ಟ್ರಾವೆಲ್ ಹಿಸ್ಟರಿ ಬೆನ್ನಟ್ಟಿದಾಗ ಗೊತ್ತಾಗಿದ್ದು, ಧಾರವಾಡ ಜಿಲ್ಲೆಯ ಅಳಿಯನಿಂದ ಗದಗ ಜಿಲ್ಲೆಗೂ ಸೋಂಕು ವ್ಯಾಪಿಸಿದೆ ಎನ್ನುವ ವಿಷಯ.

ಆಗಿದ್ದೇನು…?
ಜೂನ್ 6ರಂದು ಗದಗ ತಾಲೂಕಿನ ಹರ್ತಿಯ ಮಾವನ ಮನೆಗೆ ಧಾರವಾಡದಿಂದ ಬಂದ ಅಳಿಯ ಅದೇ ದಿನ ತನ್ನೂರಿಗೆ ಮರಳಿದ್ದಾನೆ. ಕೆಲದಿನಗಳ ನಂತರ ತೀವ್ರ ಜ್ವರದಿಂದಾಗಿ ಆತ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿದ್ದಾನೆ. ಆಗ ಪರೀಕ್ಷೆಯಲ್ಲಿ 12-06-2020 ರಂದು ಆತನಿಗೆ‌ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಅಷ್ಟೊತ್ತಿಗಾಗಲೇ ಅಳಿಯ (ಪಿ-6255)ನಿಂದಾಗಿ ಹರ್ತಿಯಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹರ್ತಿಯ ಅವರ ಬೀಗರ ಕುಟುಂಬವನ್ನು ಪರೀಕ್ಷೆಗೊಳಪಡಿಸಿದಾಗ ಕುಟುಂಬದ ಇಬ್ಬರಲ್ಲಿ ಹಾಗೂ ಗ್ರಾಮದ ಓರ್ವ ವೈದ್ಯನಿಗೆ ಜೂನ್ 18 ರಂದು ಪಾಸಿಟಿವ್ ದೃಢಪಟ್ಟಿದೆ. ಈ ಕುಟುಂಬದ ಪಿ-7854(23 ವರ್ಷದ) ಪುರುಷನಿಗೆ ತಪಾಸಣೆ ಮಾಡಿದ ಪರಿಣಾಮ ವೈದ್ಯನಿಗೂ ಪಿ-7632(40 ವರ್ಷ) ಸೋಂಕು ತಗುಲಿದೆ.

ನಾಲ್ಕೈದು ಗ್ರಾಮಗಳಲ್ಲಿ ಆತಂಕ
ಆದ್ರೆ ಸೋಂಕಿತ ವೈದ್ಯ, ಹರ್ತಿ ಗ್ರಾಮ ಸೇರಿದಂತೆ ಕಣವಿ, ಹೊಸೂರು, ಬೆಳದಡಿ ಗ್ರಾಮದ ಹಲವರಿಗೆ ಚಿಕಿತ್ಸೆ ನೀಡಿದ್ದಾರೆ. ಇದರಿಂದಾಗಿ ಇವರು ಚಿಕಿತ್ಸೆ ನೀಡಿದ ಗ್ರಾಮಗಳಲ್ಲಿ 97 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕ್ವಾರಂಟೈನ್ ನಲ್ಲಿರುವವರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುಖ್ಯವಾಗಿ ವೈದ್ಯನ ಪತ್ನಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದು, ಅವರು ಕಾರ್ಯನಿರ್ವಹಿಸುವ ಶಾಲೆಯ ಶಿಕ್ಷಕರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ. ಇದರಿಂದ ಸುತ್ತಲಿನ ಗ್ರಾಮಗಳ ಜೊತೆಗೆ ಅವರ ಪತ್ನಿ ಕಾರ್ಯನಿರ್ವಹಿಸುವ ಊರಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

Exit mobile version