ಎಸ್.ಎಸ್.ಎಲ್ಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು!

ಬೆಂಗಳೂರು: ರಾಜ್ಯದಲ್ಲಿ ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ವೇಳಾಪಟ್ಟಿ ಕೂಡ ಬಿಡುಗಡೆಯಾಗಿತ್ತು. ಈಗಾಗಲೇ ಪಿಯು ಪರೀಕ್ಷೆ ಕೂಡ ಮುಗಿದಿವೆ. ಕೊರೊನಾದ ಈ ಸಂಕಷ್ಟದಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಸಚಿವರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಈ ಕುರಿತು ಹಲಸೂರು ಗೇಟ್ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಬಲವಂತವಾಗಿ ಪರೀಕ್ಷೆ ನಡೆಸುತ್ತಿದ್ದು, ಇದು ಮಕ್ಕಳ ಆರೋಗ್ಯದೃಷ್ಟಿಯಿಂದ ಬಹಳಷ್ಟು ಅಪಾಯ ಎಂದು ಆರೋಪಿಸಲಾಗಿದೆ. ಈಗಾಗಲೇ ತೆಲಂಗಾಣ ಮತ್ತು ಆಂದ್ರಪ್ರದೇಶದಲ್ಲಿ ಪರೀಕ್ಷೆ ರದ್ದು ಮಾಡಿದ್ದು ರಾಜ್ಯದಲ್ಲಿ ಮಾತ್ರ ಶಿಕ್ಷಣ ಸಚಿವರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶಿಕ್ಷಣ ಸಚಿವರು ಪರಿಕ್ಷೆ ನಡೆಸುವ ಕುರಿತು ಪರೀಕ್ಷಾ ಮಂಡಳಿಯ ಸದಸ್ಯರ ಸಹಿಯಿಲ್ಲದೆ, ತಾವೊಬ್ಬರೆ ನಿರ್ಧಾರ ಕೈಗೊಂಡಿದ್ದಾರೆ. ಪರೀಕ್ಷಾ ಮಂಡಳಿ ತೆಗೆದುಕೊಳ್ಳಬೇಕಿದ್ದ ತಿರ್ಮಾನವನ್ನು ಸಚಿವರು ತೆಗೆದುಕೊಂಡಿದ್ದು ಎಷ್ಟು ಸರಿ? ಪಾಲಕರ ಆತಂಕ ಹಾಗೂ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೇಲೆ ದೂರು ದಾಖಲಿಸಿದ್ದೇವೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಅಧ್ಯಕ್ಷ ಆದರ್ಶ್‌ ಅಯ್ಯರ್‌ ತಿಳಿಸಿದ್ದಾರೆ.

Exit mobile version