ಶಾಸಕರಿಗಿಂತ ಹಿಂಬಾಲಕನದ್ದೆ ಆವಾಜ್…! ಬಸವಂತರಾಯ್ ವಿರುದ್ಧ ಜನರ ಆಕ್ರೋಶ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರ ಹಿಂಬಾಲಕ ಬಸವಂತರಾಯ್ ಕುರಿ ಅವರು ತಾಂಡದ ಜನರಿಗೆ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶಾಸಕ ಪ್ರತಪಗೌಡ ಪಾಟೀಲ್ ಅವರು ಮಟ್ಟೂರು ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಗೆ ಆಗಮಿಸಿದ್ದರು. ನಂತರ ತಾಂಡದ ರಸ್ತೆ ಕಾಮಗಾರಿ ಕುರಿತು ವೀಕ್ಷಣೆ ಮಾಡಲು ತೆರಳಿದ ವೇಳೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ನಾವು ಓಟು ಹಾಕಿ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ಆದರೆ ಇದುವರೆಗೆ ನಮಗೆ ಯಾವ ಕೆಲಸ ಕೊಟ್ಟಿಲ್ಲ ತಾಂಡದ ಕಾಮಗಾರಿ ನಮಗೆ ಕೊಡಿ ನಮ್ಮೂರ ಕೆಲಸ ನಾವು ಮಾಡಿಸಿಕೊಳ್ಳುತ್ತೇವೆ ಎಂದು ಕೇಳಿದ್ದಾರೆ.

ನಾವು 15 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇವೆ ಅದರಲ್ಲಿ ನಾನು ಮಟ್ಟೂರು ಗ್ರಾ.ಪಂ ಸದಸ್ಯ ನನ್ನ ಗಮನಕ್ಕೆ ಕೂಡ ಈ ಕಾಮಗಾರಿ ವಿಷಯ ಯಾರು ಹೇಳಿಲ್ಲ ಈ ಕೆಲಸ ನಾವೇ ಮಾಡುತ್ತೇವೆ ಅಂತ ಹೇಳಿದ್ರೆ ನಮಗೆ ಧಮ್ಕಿ ಹಾಕುತ್ತಿದ್ದಾರೆ.

ಲೋಕೇಶ ಜಾಧವ ಮಟ್ಟೂರು ತಾಂಡ ನಿವಾಸಿ

ಜನರು ಪ್ರಶ್ನಿಸಿದಾಗ ಶಾಸಕರು ಸುಮ್ಮನಿದ್ರು ಅವರ ಹಿಂಬಾಲಕ ಬಸವಂತರಾಯ್ ಕುರಿ ಮತ್ತು ತಾಪಂ. ಸದಸ್ಯ ಮಲ್ಲೇಶಗೌಡ ಪಾಟೀಲ್ ಮಧ್ಯ ಪ್ರವೇಶಿಸಿ ನಮಗೆ ಏನು ಅನ್ಸುತ್ತೆ ಆ ರೀತಿ ಮಾಡುತ್ತೇವೆ ಅದನ್ನು ಕೆಳೋಕೆ ನೀವು ಯಾರು ಅಂತ ತಾಂಡದ ಜನರಿಗೆ ಆವಾಜ್ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಸಕರ ಹಿಂಬಾಲಕರ ಮಾತಿನಿಂದ ಸಿಟ್ಟಿಗೆದ್ದ ಸ್ಥಳೀಯರು ಅಕ್ರೋಶಗೊಂಡು ಕೆಲ ಕಾಲ ವಾಗ್ವದ ನಡೆಸಿದರು. ಮಗದೊಮ್ಮೆ ಕುರಿ ಅವರು ಮಧ್ಯೆ ಪ್ರವೇಶಿಸಿ ಮುದಗಲ್ ಕ್ರಾಸ್ ನಿಂದ ದ್ಯಾಮಣ್ಣನ ಗೊಲ್ಲಾರಹಟ್ಟಿ ತನಕ 1.74 ಕೋಟಿ ಕಾಮಗಾರಿ ಇದ್ದು ಈ ಕಾಮಗಾರಿ ನಾನೇ ಮಾಡುತ್ತೇನೆ. ನೀವು ಕೆಲಸ ಮಾಡುವಷ್ಟು ದೊಡ್ಡವರು ಏನು ಅಲ್ಲ. ನಾವು ಈ ಕಾಮಗಾರಿ ಹಾಕಿಸಿಕೊಂಡು ಬಂದಿದ್ದೇವೆ ನಾವೇ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ ಎಂದು ತಾಂಡದ ನಿವಾಸಿಗಳಾದ ಶೇಕರ್, ರಮೇಶ್, ರಾಮಪ್ಪ ಕಾರವಾರ್, ಕರಿಯಪ್ಪ, ಶಂಕ್ರಪ್ಪ, ಚಂದ್ರಶೇಖರ್, ನಿರ್ಮಲಪ್ಪ ಸೇರಿದಂತೆ ಇತರರು ಆರೋಪಿಸಿದರು.

Exit mobile version