ನೇಪಾಳದೊಂದಿಗೆ ನಮ್ಮದು ಗಟ್ಟಿ ಸಂಬಂಧ: ಹೈರಾಣಾಗಿರುವ ಭಾರತಕ್ಕೆ ಇದು ಇನ್ನಷ್ಟು ಮುಜುಗರ

ದೆಹಲಿ: ನೇಪಾಳದೊಂದಿಗೆ ನಮ್ಮ ಸಂಬಂಧ ಬಲಿಷ್ಠವಾಗಿದೆ ಎಂದು ಭಾರತೀಯ ಸೇನಾ ಮುಖಸ್ಥ ಎಂ.ಎಂ.ನರವಣೆ ಹೇಳಿದ್ದಾರೆ. ನಾವು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ, ಧಾರ್ಮಿಕವಾಗಿ ಪರಸ್ಪರ ಕೊಂಡಿಗಳನ್ನು ಹೊಂದಿದ್ದೇವೆ. ಪರಸ್ಪರ ಜನರೊಂದಿಗೆ ಗಟ್ಟಿಯಾದ ಸಂಬಂಧವಿದೆ. ಅವರೊಂದಿಗಿನ ನಮ್ಮ ಸಂಬಂಧ ಸದಾ ಬಲಿಷ್ಠವಾಗಿದೆ ಮತ್ತು ಭವಿಷ್ಯದಲ್ಲಿಯೂ ಬಲಿಷ್ಠವಾಗಿರಲಿದೆ ಎಂದು ಅವರು ಹೇಳಿದರು.
ಕೊರೊನಾ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ನೆರೆಯ ರಾಷ್ಟ್ರ ನೇಪಾಳ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ರಾಷ್ಟ್ರದೊಳಗೆ ಕೊರೊನಾ ಪ್ರವೇಶಿಸಲು ಭಾರತವೇ ನೇರ ಹೊಣೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೇಳಿದ್ದರು. ಜೊತೆಗೆ, ನೇಪಾಳ – ಭಾರತ ಗಡಿಯಲ್ಲಿ ಕೂಡ ಉಭಯ ದೇಶಗಳ ನಡುವೆ ಸಾಕಷ್ಟು ಕಿರಿಕಿರಿ ಸಂಭವಿಸಿವೆ.
ಕಳೆದ ಎರಡು ದಿನಗಳ ಹಿಂದೆ ಬಿಹಾರದ ಸೀತಾಮರಿ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಆರೋಪ ಕೇಳಿಬಂದಿತ್ತು. ದಾಳಿ ವೇಳೆ ಒಬ್ಬ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ ಎಂದು ಸೀಮಾ ಸುರಕ್ಷಾ ಬಲ ಹೇಳಿಕೆ ನೀಡಿತ್ತು.
ಈ ಎಲ್ಲ ಬೆಳವಣಿಗೆಗಳಿಂದಾಗಿ ಉಭಯ ದೇಶಗಳ ನಡುವೆ ಸಾಕಷ್ಟು ವೈಮನಸ್ಸು ಮೂಡಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವ್ಯಂಗ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಭಾರತವನ್ನು ನೇಪಾಳ ಕೂಡ ಹೆದರಿಸುತ್ತಿದೆ ಎಂದಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷ ಮತ್ತು ಅವರ ಬೆಂಬಲಿಗರು ಭಾರತವನ್ನು ಪ್ರಧಾನಿ ವಿಶ್ವಗುರು ಎನ್ನುತ್ತಾರೆ. ಅವರಿಗೆ 56 ಇಂಚಿನ ಎದೆ ಇದೆ ಎನ್ನುವುದು ಅವರ ಬೆಂಬಲಿಗರ ವಾದ. ಆದರೆ, ಇಷ್ಟು ದಿನಗಳ ಕಾಲ ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ತೊಂದರೆ ಅನುಭವಿಸುತ್ತಿದ್ದ ಭಾರತ, ಇದೀಗ ಪುಟ್ಟ ರಾಷ್ಟ್ರ ನೇಪಾಳದಿಂದಲೂ ಕಿರಿಕಿರಿ ಎದುರಿಸಬೇಕಾಗಿ ಬಂದಿದೆ. ಇನ್ನು ಭೂತಾನ್, ಬಾಂಗ್ಲಾ ಮತ್ತು ಶ್ರೀಲಂಕಾ ದೇಶಗಳೂ ಭಾರತದ ಮೇಲೆ ಕಾಲು ಕೆರೆಯುತ್ತವೆಯೇ ಎಂಬ ಅನುಮಾನ ಮೂಡಿದೆ.
ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಜನರಲ್ ನರವಣೆ ನೀಡಿರುವ ಹೇಳಿಕೆ ಉಭಯ ದೇಶಗಳ ನಡುವಿನ ಮುನಿಸನ್ನು ಮರೆಮಾಚಲು ನಡೆಸಿದ ಯತ್ನಿಸಿದಂತಿರುವುದು ಸುಳ್ಳಲ್ಲ. ಏನಾದರೂ ಆಗಲಿ ದೇಶ ಬಲಿಷ್ಠ ಪ್ರಧಾನಿ ಕೈಯಲ್ಲಿದೆ, ಸುರಕ್ಷಿತವಾಗಿದೆ ಎಂದು ಎಲ್ಲೆಡೆ ಹೇಳಿಕೊಂಡು ಅಹಂಕಾರದಿಂದ ತಿರುಗುತ್ತಿದ್ದ ಆಡಳಿತಾರೂಢ ಪಕ್ಷಕ್ಕೆ ಮತ್ತು ಅವರ ಬೆಂಬಲಿಗರಿಗೆ ಏಟುಗಳ ಮೇಲೆ ಏಟುಗಳು ಬೀಳುತ್ತಿರುವುದಂತೂ ಸುಳ್ಳಲ್ಲ. ಕೆಲವೇ ದಿನಗಳ ಹಿಂದೆ ಭಾರತ-ಚೀನಾ ಗಡಿಯಲ್ಲಿ ಚೀನಾ ಸಮಸ್ಯೆ ತಂದಿತ್ತು. ಕೊರೊನಾ ವಿರುದ್ಧದ ಹೋರಾಟದಲ್ಲೇ ಹೈರಾಣಾಗಿರುವ ಭಾರತಕ್ಕೆ ಇದು ಇನ್ನಷ್ಟು ಮುಜುಗರ ತಂದಿದೆ.

Exit mobile version