ಗದಗ ಜಿಲ್ಲೆ ಅಕ್ರಮ ಮರಳು ಗಣಿಗಾರಿಕೆ: ತಹಶೀಲ್ದಾರ್-ಸಿಪಿಐ ಸೇರಿ 9 ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್..!

ಗದಗ: ಅಕ್ರಮ ಮರಳು ಗಣಿಗಾರಿಕೆ ಕುರಿತು ಉಚ್ಛ ನ್ಯಾಯಾಲಯ ಬೆಂಗಳೂರಿನಲ್ಲಿ ರಿಟ್ ಪಿಟೇಶನ್ ದಾಖಲಾಗಿತ್ತು. ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಹೈಕೋರ್ಟ್ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೋಗನೂರು, ನಾಗರಮಡುವು,ಅಂಕಲಿ ಗ್ರಾಮಗಳಲ್ಲಿನ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಶಿರಹಟ್ಟಿ ತಹಶೀಲ್ದಾರ್ ಹಾಗೂ ಸಿಪಿಐ ಸೇರಿ ವಿವಿಧ ಇಲಾಖೆಯ 13 ಅಧಿಕಾರಿಗಳ ಪೈಕಿ 9 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಈ ಬಗ್ಗೆ ಮುಂಡರಗಿಯ ರೈತಮುಖಂಡ ವಿಠಲ್ ಗಣಾಚಾರಿ ಸೇರಿ ಗದಗ ಜಿಲ್ಲೆಯ ಬೇರೆಬೇರೆ ಗ್ರಾಮಗಳ 22 ಜನ ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತು ಅರ್ಜಿದಾರರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳಾದ ಇ.ಎಸ್.ಇಂದ್ರೇಶ್ 08-06-2020 ರಂದು ಸರ್ಕಾರದ ಅಡ್ವೊಕೇಟ್ ಜನರಲ್ ಅವರಿಗೆ ತುರ್ತು ನೊಟೀಸ್ ನೀಡಿದ್ದು ನೋಟಿಸ್ ಮೂಲಕ ಶಿರಹಟ್ಟಿ ತಹಶೀಲ್ದಾರ್, ಸಿಪಿಐ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಇಲಾಖೆ ನಿರ್ದೇಶಕರು, ಜಿಲ್ಲಾ ಮರಳು ಟಾಸ್ಕ್ ಫೋರ್ಸ್ ಕಮೀಟಿ, ಗಣಿ ಇಲಾಖೆಯ ಬಳ್ಳಾರಿಯ ಹೆಚ್ಚುವರಿ ನಿರ್ದೇಶಕರು, ಗದಗಿನ ಹಿರಿಯ ಭೂವಿಜ್ಞಾನಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಉಪವಿಭಾಗಾಧಿಕಾರಿ, ಕೋಗನೂರು ಗ್ರಾಮ ಪಂಚಾಯ ಸೇರಿದಂತೆ ಒಟ್ಟ 13 ಅಧಿಕಾರಿಗಳ ಪೈಕಿ  9ಇಲಾಖೆಗೆ ನೋಟಿಸ್ ಜಾರಿ ಮಾಡಲಾಗಿದೆ.

ಅದರಲ್ಲಿ ಶಿರಹಟ್ಟಿಯ ತಹಶಿಲ್ದಾರ ಮತ್ತು ಪೊಲೀಸ್ ಇನ್ ಸ್ಪೆಕ್ಟರ್ ಇವರಿಗೆ ದಿನಾಂಕ:22-06-2020 ಬೆಳಿಗ್ಗೆ 10 ಗಂಟೆಗೆ ಸದರಿ ಪ್ರಕರಣದ ಕುರಿತು  ವಿಚಾರಣೆ ಇದ್ದು  ಆ ದಿನ ಸೂಕ್ತ ದಾಖಲಾತಿಯೊಂದಿಗೆ ವಿಚಾರಣೆಗೆ ಭಾಗವಹಿಸಲು ಸೂಚಿಸಲಾಗಿದೆ‌.  ಕಳೆದ  ವರ್ಷ ಫೆ.12,  2019 ರಂದು ಅರ್ಜಿದಾರರು ಅಕ್ರಮ ಮರಳು ಗಣಿಗಾರಿಕೆ ಕುರಿತು  ಡಿಸಿಗೆ ಮನವಿ ಮಾಡಿದ್ದರು. ಈ ಕುರಿತು ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಪರಿಶೀಲಿಸಿ ಅವಶ್ಯವೆನಿಸಿದಲ್ಲಿ ಈ ತಿಂಗಳ 22 ರ ಒಳಗಾಗಿ ಖುದ್ಧಾಗಿ ಸ್ಥಳ ಪರಿಶೀಲಿಸಿ ಅದರ ವರಧಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ನ್ಯಾಯಾಲಯ ನೋಟಿಸ್ ಜಾರಿ ಮಾಡಿರುವುದು ಸಂತಸದ ಸಂಗತಿ. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತಪರ ಕಾಳಜಿ ತೋರುತ್ತಾರೆ ಎನ್ನುವ ನಂಬಿಕೆ ಇದೆ. ಇನ್ನು ಗದಗ ಜಿಲ್ಲೆಯಲ್ಲಿರುವ ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ಅರ್ಜಿದಾರ ವಿಠಲ್ ಗಣಾಚಾರಿ ತಿಳಿಸಿದರು.

Exit mobile version