ದಿಗ್ವಿಜಯ್ ಸಿಂಗ್ ನಕಲಿ ಟ್ವೀಟರ್ ರಚನೆ: ದೂರು ನೀಡಿದ ಕೈ ನಾಯಕ

ಭೋಪಾಲ್: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆ ತೆರೆದು, ಆಕ್ರಮಣಕಾರಿ ಪೋಸ್ಟ್ ಗಳನ್ನು ಹಾಕಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದ ಸೈಬರ್ ಘಟಕದಲ್ಲಿ ದೂರು ದಾಖಲಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಭೋಪಾಲ್ ನ ಸೈಬರ್ ಸೆಲ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ, ಯಾವುದೋ ವ್ಯಕ್ತಿಯೊಬ್ಬ ನನ್ನ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆಯನ್ನು ತೆರೆದು, ಅದನ್ನು ನಿರ್ವಹಿಸುತ್ತಿದ್ದು, ಆಕ್ರಮಣಕಾರಿಯಾದ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾನೆ ಎಂದಿದ್ದಾರೆ. ಅಲ್ಲದೇ, ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ನಕಲಿ ಟ್ವೀಟರ್ ಖಾತೆ ಮೂಲಕ ನಡೆಸಲಾಗುತ್ತಿರುವ ಕುಕೃತ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ದೂರು ಸ್ವೀಕರಿಸಿದ ಬಳಿಕ ಕಾರ್ಯೋನ್ಮುಖರಾಗಿರುವ ಮಧ್ಯಪ್ರದೇಶ ಸೈಬರ್ ಸೆಲ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸಿಂಗ್ ಸೋಲಂಕಿ, ಟ್ವೀಟರ್ ಇಂಡಿಯಾದೊಂದಿಗೆ ಸಂಭಾಷಣೆ ನಡೆಸಿ, ನಕಲಿ ಖಾತೆಯನ್ನು ಡಿಲೀಟ್ ಮಾಡಲು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

Exit mobile version