ಶಾಶ್ವತ ಚಿರನಿದ್ರೆಗೆ ಜಾರಿದ ಚಿರು..!

ತಮಿಳುನಾಡು ಅಂದ ತಕ್ಷಣವೇ ಕಾವೇರಿ ನದಿ ವಹಿವಾಟೆ ನಮ್ಮ  ಕಣ್ಣೆದುರು ಬರುತ್ತದೆ. ಕಾವೇರಿ ಸಮಸ್ಯೆ ತೀವ್ರ ಇದ್ದ 1980ರ ದಶಕದಲ್ಲಿ ಈ ಹುಡುಗ ಹುಟ್ಟುತ್ತಾನೆ. ಬೆಂಗಳೂರಿನಲ್ಲೆ ಬೆಳೆಯುವ ಈ ಹುಡುಗನ ಸಿನಿಮಾ ಹುಚ್ಚಿಗೆ ಅವರ ಮಾವ ನೀರು ಎರೆಯುತ್ತಾರೆ.

ಕನ್ನಡ ಮಾವ, ಕನ್ನಡ ತಾತ!

ಕನ್ನಡದ ಶ್ರೇಷ್ಠ ವಿಲನ್ ಗಳನ್ನು ಪಟ್ಟಿ ಮಾಡಿದಾಗ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್ ಜೊತೆಗೆ ಶಕ್ತಿ ಪ್ರಸಾದ್ ಎಂಬ ಮತ್ತೊಂದು ಹೆಸರು ಉಲ್ಲೇಖವಾಗಲೇಬೇಕು. ಅವರ ಪುತ್ರ ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಾರೆ. ಆದರೆ ಅವರಿಗೆ ತಮಿಳು ಚತ್ರರಂಗ ಕೈ ಮಾಡಿ ಕರೆಯುತ್ತದೆ. ರಜನಿಕಾಂತ್, ಪ್ರಕಾಶ್ ರೈ, ಚರಣರಾಜ್ ತರಹದ ಪ್ರತಿಭಾವಂತ ಕನ್ನಡಿಗರಿಗೆ ತಮಿಳು ಚಿತ್ರರಂಗ ನೆಲೆ ಕೊಡುತ್ತದೆ. ಇದರಲ್ಲಿ ಇಬ್ಬರು ಅಲ್ಲಿ ದುಡಿದ ದುಡ್ಡನ್ನು ಕನ್ನಡ ಚಿತ್ರರಂಗಕ್ಕೆ ಹೂಡಿಕೆ ಮಾಡುತ್ತಾರೆ. ಅವರು ಪ್ರಕಾಶ್ ರೈ ಮತ್ತು ಅರ್ಜುನ್ ಸರ್ಜಾ, ಅರ್ಜುನ್ ಸರ್ಜಾ, ತಮಿಳಿನಲ್ಲಿ ಹೀರೊ ಆಗಿ ದುಡಿದ ದುಡ್ಡನ್ನು ಇಲ್ಲಿ ತಮ್ಮ ಅಕ್ಕನ ಮಕ್ಕಳನ್ನು ಪ್ರಮೋಟ್ ಮಾಡಲು ಹಾಕುತ್ತಾರೆ. ಹೀಗಾಗಿ ಇಲ್ಲಿ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಎಂಬ ಎರಡು ಪ್ರತಿಭೆಗಳು ಹುಟ್ಟುತ್ತವೆ.

ವಾಯುಪುತ್ರದಲ್ಲಿ ಖಡಕ್ ಆಕ್ಷನ್ ಹೀರೋ ಆಗಿ ಮಿಂಚುವ ಚಿರಂಜೀವಿ  ಸರ್ಜಾ ಆಕ್ಷನ್ ಚಿತ್ರಗಳ ಜೊತೆಗೆ ‘ಅಮ್ಮಾ ಐ ಲವ್ ಯು’ ಎಂಬ ಚಿತ್ರದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಖ್ಯಾತ ನಾಟಕ ಬರಹಗಾರ ಮರುಳಸಿದ್ದಪ್ಪನವರ ಪುತ್ರ ಚೈತನ್ಯ ನಿರ್ದೇಶಿಸಿಸದ ಅಮ್ಮ ಐ ಲವ್ ಯು ಚಿತ್ರ ಸಾಕಷ್ಟು ಸಂಚಲನ ಉಂಟು ಮಾಡಿತ್ತು. 2018ರಲ್ಲಿ ಕನ್ನಡದ ಖ್ಯಾತ ಪೋಷಕ ನಟರಾದ ಸುಂದರರಾಜ  ಮತ್ತು ಪ್ರಮೀಳಾ ಜೋಷಾಯ್ ಪುತ್ರಿ,  ಪ್ರತಿಭಾವಂತ ನಟಿ  ಮೇಘನಾ ರಾಜ್ ರನ್ನು ಮದುವೆಯಾಗುವ ಚೀರಂಜೀವಿ ಮೆದು ಸ್ವಭಾವದ ಹುಡುಗ ಎಂದೇ ಪ್ರಸಿದ್ಧರು. ನಟ, ನಿರ್ದೇಶಕ ಸಂದೇಶ ಶೆಟ್ಟಿ ಹೇಳುವ ಪ್ರಕಾರ, ‘ಚಿರಂಜೀವಿ ತುಂಬ  ಸೌಜನ್ಯದ ವ್ಯಕ್ತಿ. ಸ್ಟಾರ್ ಡಮ್ ಪ್ರದರ್ಶನ ಮಾಡುತ್ತಿರಲಿಲ್ಲ. ಪ್ರೆಸ್ ಮೀಟ್ ಗಳಲ್ಲಿ ಸಾಮಾನ್ಯ  ವ್ಯಕ್ತಿಯಂತೆ ಇರುತ್ತಿದ್ದರು ಎಂದರು.

ಚಿತ್ರ ರಂಗದ ಉದಯೋನ್ಮುಖ ಮೇರು ನಟ ಚಿರಂಜೀವಿ ಸರ್ಜಾ ಅವರು ವಿಧಿವಶರಾದ ವಿಷಯ ಕೇಳಿ ನನಗೆ ತುಂಬ ನೋವಾಯಿತು. ಇನ್ನು ಅನೇಕ ವರ್ಷಗಳು ಚಿತ್ರರಂಗದಲ್ಲಿ ನಾಯಕ ನಟರಾಗಿ ಕಲಾಸೇವೆ ಮಾಡಬೇಕಾಗಿದ್ದ ಯುವ ನಟನಿಗೆ ಆ ದೇವರು ಇಷ್ಟು ಬೇಗ ಸಾವನ್ನು ಕೊಡಬಾರದಿತ್ತು. ಈ ಸಾವು ಅವರ ಕುಟುಂಬಕ್ಕೆ ಅಲ್ಲದೆ ಇಡೀ ಚಿತ್ರರಂಗಕ್ಕೆ ನೋವನ್ನು ಕೊಟ್ಟಿದೆ. ಅವರ ಎರಡು ಕುಟುಂಬಕ್ಕೆ ಆ ದೇವರು ನೋವನ್ನು ತಡೆದುಕೊಳ್ಳುವಷ್ಟು ಶಕ್ತಿಯನ್ನು ಕೊಡಲಿ. ಚಿರುಗೆ ಶಾಶ್ವತ ಶಾಂತಿ ದೊರಕಲಿ.

ರಾಮಕೃಷ್ಣ (ಪ್ರವೀಣ್), ಅಧ್ಯಕ್ಷರು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ

ಅಪ್ಪನಾಗುವ ಖುಷಿಯಲ್ಲಿದ್ದ ಚಿರು..!

ಚಿರು ಸರ್ಜಾ ಅಪ್ಪನಾಗುವ ಹಿಗ್ಗಿನಲ್ಲಿದ್ದರು. ಏಪ್ರೀಲ್ ನಲ್ಲಿ ಪತ್ನಿ ಮೇಘನಾ ತಾಯಿಯಾಗುವ ವಿಚಾರ ತಿಳಿದಿತ್ತಂತೆ. ಪತ್ನಿಯ ಸೀಮಂತಕ್ಕೂ ಚಿರು ಪ್ಲ್ಯಾನ್ ಮಾಡಿದ್ದರಂತೆ. 39 ವರ್ಷ ತುಂಬ ಚಿಕ್ಕ ವಯಸ್ಸು. ಆದರೆ ಕಲಾ ಜಗತ್ತಿನಲ್ಲಿ ಚಿರು ಇನ್ನು ಕೆಲ ಕಾಲ ರಾರಾಜಿಸಬೇಕಿತ್ತು. ಆದರೆ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅವರು ಉಸಿರಾಟದ ಸಮಸ್ಯೆಯ ಮೂಲಕ ಸಾವನ್ನಪ್ಪಿದ್ದು ಅವರ ಅಭಿಮಾನಿಗಳು ದುಖಃದ ಸಂಗತಿ. ಜೊತೆಗೆ ಚಿತ್ರರಂಗ ಒಬ್ಬ ಅಪ್ಪಟ ಹಾಗೂ ಹೃದಯ ವಂತಿಕೆಯ ನಟನನ್ನು ಕಳೆದುಕೊಂಡಂತಾಗಿದೆ. ಟಿವಿ ರೈಟ್ಸ್ ಮತ್ತು ಡಬ್ಬಿಂಗ್ ರೈಟ್ಸ್ ಮೂಲಕ ತನ್ನ ಮೌಲ್ಯ ಹೆಚ್ಚಿಸಿಕೊಂಡ ಈ ಹುಡುಗ ಕನ್ನಡದ ಹೆಮ್ಮೆಯಂತೂ ನಿಜ. ಶಾಶ್ವತ ಚಿರನಿದ್ರೆಗೆ ಜಾರಿದ ಚಿರು ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿ.

Exit mobile version