ಬಿಜೆಪಿಯಿಂದ ಎಂಎಲ್ಸಿ ಆಗಬೇಕಂತಾರಾ ವಾಟಾಳ್ ನಾಗರಾಜ್..?

ಬೆಂಗಳೂರು: ಕನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಇತ್ತಿಚೆಗೆ ಅವರು ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ ವಿಚಾರ ಇಂಥ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿತ್ತು.

ಆದರೆ ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ನಾನು ಮತ್ತು ಶ್ರೀನಿವಾಸ್ ಪ್ರಸಾದ್ 40 ವರ್ಷದ ಸ್ನೇಹಿತರು. ಹೀಗಾಗಿ ಅವರ ಅರೋಗ್ಯ ವಿಚಾರಿಸಲು ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಆದರೆ ಇವರು ಇದೇ ವೇಳೆ ಬಿಜೆಪಿ ಪಕ್ಷ ನನಗೆ ಎಂ.ಎಲ್.ಸಿ ಮಾಡಿದರೆ ಬಿಜೆಪಿಗೆ ಶಕ್ತಿ ಮತ್ತು ಗೌರವ ಬರುತ್ತದೆ. ಇದರಿಂದ ರಾಜ್ಯದ ಜನ ಅವರನ್ನು ಮೆಚ್ಚುತ್ತಾರೆ. ನಾನು ಯಾರನ್ನು ಎಂಎಲ್ಸಿ ಮಾಡಿ ಎಂದು ಕೇಳಿಲ್ಲ. ನಾನು 5 ಭಾರಿ  ಶಾಸಕನಾಗಿದ್ದೇನೆ. ಹೀಗಾಗಿ ನನ್ನನ್ನು ಎಂಎಲ್ಸಿ ಮಾಡಿದರೆ ಬಿಜೆಪಿಗೆ ಗೌರವ ಬರುತ್ತದೆ. ಆದರೆ ಈ ವಿಚಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಹಾಗಾದರೆ ವಾಟಾಳ್ ನಾಗರಾಜ್ ಅವರ ಮಾತಿ ಒಳ ಅರ್ಥ ಏನು ಎನ್ನುವುದು ಪ್ರಶ್ನೆಗೆ ಗ್ರಾಸವಾಗಿದೆ. ವಾಟಾಳ್ ಬಿಜೆಪಿಯಿಂದ ಎಂಎಲ್ಸಿ ಆಗುವ ಇರಾದೆ ಹೊಂದಿದ್ದಾರೆಯೇ? ಎನ್ನುವ ಚರ್ಚೆಗೆ ಇವರ ಮಾತುಗಳೇ ಪುಷ್ಟಿ ನೀಡುವಂತಿವೆ.  

ಮುಂದುವರೆದು ಮಾತನಾಡಿದ ಅವರು ಎಂಎಲ್ಸಿ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತೇನೆ. ಗುಲ್ಬರ್ಗ ಈಶಾನ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಒತ್ತಾಯ ಇದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧಾರಿಸಿಲ್ಲ. ಆದರೆ ಚುನಾವಣೆ ಸ್ಪರ್ಧೆ ಮಾತ್ರ ಶತಸಿದ್ಧ ಎಂದಿದ್ದಾರೆ. ಕೊನೆಗೆ ಮೂರು ಜನ್ಮ ಕಳೆದರೂ ನಾನು ಬಿಜೆಪಿ ಸೇರಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ.

Exit mobile version