ಮಲೆನಾಡ ಜನರ ನಿದ್ದೆಗೆಡಿಸಿದ ಪಾದರಾಯನಪುರ!

ಶಿವಮೊಗ್ಗ: ಪಾದರಾಯನಪುರದ ಗಲಾಟೆ ಮಲೆನಾಡಿನಲ್ಲಿ ಭಯ ಹುಟ್ಟಿಸುತ್ತಿದೆ. ಕೊರೊನಾ ದೇಶ ಹಾಗೂ ರಾಜ್ಯದಲ್ಲಿ ವಕ್ಕರಿಸಿದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ಒಂದು ಕೇಸ್ ಕೂಡ ಇರಲಿಲ್ಲ. ಆದರೆ, ಸದ್ಯ ಈ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಮೊದಲು ಹೊರ ರಾಜ್ಯಗಳಿಂದ ಜಿಲ್ಲೆಗೆ ಭೇಟಿ ನೀಡಿದವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಇದೀಗ ಬೆಂಗಳೂರಿನ ಪಾದರಾಯನಪುರ ಹಾಗೂ ಶಿವಾಜಿನಗರ ಸಹ ಮಲೆನಾಡಿಗೆ ಕಂಟಕವಾಗಿ ಕಾಡುತ್ತಿದೆ.

ಪಾದರಾಯನಪುರದಲ್ಲಿ ಗಲಭೆ ನಡೆದಾಗ ಜಿಲ್ಲೆಯಿಂದ 22 ಜನ ಕೆಎಸ್ ಆರ್ ಪಿ ಪೊಲೀಸರು ಕರ್ತವ್ಯಕ್ಕೆ ತೆರಳಿದ್ದರು.  ಈ ಪೊಲೀಸರು ಕಳೆದ ನಾಲ್ಕು ದಿನಗಳ ಹಿಂದೆ ಮರಳಿ ಜಿಲ್ಲೆಗೆ ಆಗಮಿಸಿದ್ದರು. ಜಿಲ್ಲೆಗೆ ವಾಪಸ್ಸಾದ ಅವರಿಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಟೆಸ್ಟ್ ನಡೆಸಿ ಕ್ವಾರಂಟೈನ್ ಗೆ ಒಳಪಡಿಸಿತ್ತು. ಇಲ್ಲಿಯವರೆಗೂ 22 ಜನರ ಪೈಕಿ 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ, ನಿನ್ನೆ 7 ಜನ ಪೊಲೀಸರಿಗೆ ಪಾಸಿಟಿವ್ ದೃಢಪಟ್ಟಿದೆ. ಉಳಿದ 12 ಜನರ ವರದಿ ಬರಬೇಕಿದೆ.

ಪಾಸಿಟಿವ್ ಪತ್ತೆಯಾಗಿರುವ ಎಎಸ್ಐಗೆ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಇಲ್ಲದಿದ್ದರೂ, ಅವರು ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಳೆದ ಹಲವು ದಿನಗಳಿಂದ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದ ವೇಳೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ನಡೆಸಿದ್ದರು. ಹೀಗಾಗಿ ಡಿಎಆರ್ ಎಎಸ್ಐಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.

ಇದೇ ಮೊದಲ ಬಾರಿಗೆ ಜಿಲ್ಲೆಯ ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯೊಬ್ಬರಿಗೂ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಹಿಂದೆ ಶಿವಮೊಗ್ಗದ ಬಾಳೆಕೊಪ್ಪದ 63 ವರ್ಷದ ರೋಗಿ ಪಿ-1305 ವೃದ್ಧನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೊರೊನಾ ಪತ್ತೆಯಾಗುವ ಎರಡು ದಿನದ ಹಿಂದೆ ವೃದ್ಧ ಆಯನೂರಿನ ಆಸ್ಪತ್ರೆಯಲ್ಲಿ ಚಳಿ ಜ್ವರ ಎಂದು ಚಿಕಿತ್ಸೆಗೆ ತೆರಳಿದ್ದರು. ಆತನಿಗೆ ವೈದ್ಯೆ ಚಿಕಿತ್ಸೆ ನೀಡಿದ್ದರು. ಇದೀಗ ಚಿಕಿತ್ಸೆ ನೀಡಿದ್ದ ವೈದ್ಯೆಗೆ ಕೊರೊನಾ ತಗುಲಿದ್ದು, ಅವರನ್ನು ಸಹ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಯಾರಿಂದ ವೈದ್ಯೆಗೆ ಪಾಸಿಟಿವ್ ಕಾಣಿಸಿಕೊಂಡಿತ್ತೋ ಆ ವೃದ್ಧ ಗುಣಮುಖರಾಗಿ ಭಾನುವಾರ ಡಿಸ್ಚಾರ್ಜ್ ಕೂಡ ಆಗಿದ್ದಾರೆ.

ಡಿಎಆರ್ ಎಎಸ್ಐ.ಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಜಯನಗರ ಠಾಣೆಯನ್ನು ಸ್ಯಾನಿಟೈಸರ್ ಮಾಡಿ ಸೀಲ್ಡೌನ್ ಮಾಡಲಾಗಿದೆ. ಸೋಂಕಿತರ ಪುತ್ರಿ ಸಹ ಇದೇ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಅವರು ತಂದೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರಬಹುದು ಎಂಬ ಕಾರಣದಿಂದ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Exit mobile version