ಗದಗ: ನದಿ ನೀರಿನ ಪಾತ್ರದ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಇದೆ ಎಂದರೆ ನಿಜಕ್ಕೂ ಆಶ್ಚರ್ಯ. ಹೌದು ನೀರಿನ ಸಮಸ್ಯೆ ಎಂದರೆ ಒಂದೆಡೆ ಆಳುವವರ ನಿರ್ಲಕ್ಷ್ಯ, ಮತ್ತೊಂದೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಹೆಚ್ಚಿನ ಹಣದ ವಸೂಲಿ. ಇದರಿಂದ ಗ್ರಾಮಸ್ಥರು ತತ್ತಿರಿಸುವಂತಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಇವತ್ತು ನಿನ್ನೆಯದಲ್ಲ. ಈ ಹಿಂದಿನಿಂದಲೂ ಒಂದಲ್ಲ ಒಂದು ನೀರಿನ ರಗಳೆ ಈ ಗ್ರಾಮದಲ್ಲಿ ಸಾಮಾನ್ಯ. ಕಳೆದ ಎರಡು ವರ್ಷದ ಹಿಂದೆಯಷ್ಟೆ ಆಶ್ರಯ ಮನೆಗಳಿರುವ ಬಡಾವಣೆಗೆ ಗ್ರಾಮ ಪಂಚಾಯತಿ ಅವರು ನೀರಿನ ಸೌಲಭ್ಯ ನೀಡದ ಕಾರಣ ಓಣಿಯ ಜನರೆಲ್ಲ ಸೇರಿ ಪೈಪ್ ಲೈನ್ ಮಾಡಿ ತಮ್ಮ ಓಣಿಗೆ ನೀರು ತರುವಲ್ಲಿ ಯಶಸ್ವಿಯಾಗಿದ್ದರು. ತುಂಗಭದ್ರೆಯ ತಟದಲ್ಲಿದ್ದರೂ ಈ ಗ್ರಾಮಸ್ಥರಿಗೆ ಇಂತಹ ಸಮಸ್ಯೆಗಳು ಇವತ್ತು ನಿನ್ನೆಯದಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೂಪಿಸಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯೂ ಇವರಿಗೆ ಶುದ್ಧ ನೀರಿಲ್ಲ. ಇನ್ನ ಈ ಊರಿನ ಮೂಲಕ ಮುಂಡರಗಿ ತಲುಪುವ ನೀರು ಶುದ್ಧಿಕರಿಸಿ ಕಳುಹಿಸಲಾಗುತ್ತದೆ. ಆದರೆ ಈ ಊರಿನವರಿಗೆ ಮಾತ್ರ ಈ ಭಾಗ್ಯ ದೊರೆತಿಲ್ಲ ಎನ್ನುವುದು ವಿಪರ್ಯಾಸ.
ಈ ಬಗ್ಗೆ ಉತ್ತರಪ್ರಭ ಪ್ರತಿಕ್ರಿಯೆಗಾಗಿ ಪಿಡಿಓ ಶಾಬುದ್ದೀನ್ ನದಾಫ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರ ಮೊಬೈಲ್ ಸಂಖ್ಯೆ ವ್ಯಾಪ್ತಿ ಪ್ರದೇಶದ ಹೊರಗಿತ್ತು.
ಹೀಗಾಗಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನೆ ನಂಬಿಕೊಂಡು ಕೊರ್ಲಹಳ್ಳಿ ಗ್ರಾಮಸ್ಥರು ಕೂರುವಂತಾಗಿದೆ. 3000 ಕ್ಕೂ ಅಧಿಕ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದರಲ್ಲಿ ಸದ್ಯ ಒಂದು ಶುದ್ಧ ಕುಡಿಯುವ ನೀರು ಘಟಕ ಮಾತ್ರ ಜೀವಂತವಾಗಿದೆ. ಎರಡು ವರ್ಷಗಳ ಹಿಂದಷ್ಟೆ ಆರಂಭವಾದ ಮತ್ತೊಂದು ಶುದ್ಧ ಕುಡಿಯುವ ನೀರಿನ ಆರಂಭವಾಗಿ ಬಾಗಿಲು ಮುಚ್ಚಿಕೊಂಡಿತು. ಆಗಿನಿಂದ ಈತನಕ ಮುಚ್ಚಿದ ಬಾಗಿಲು ತೆರದೇ ಇಲ್ಲ.
ಒಂದು ಕ್ಯಾನಿಗೆ 5 ರೂ..!
ಇಲ್ಲಿನ ಒಂದು ಶುದ್ಧ ಕುಡಿಯುವ ನೀರಿನ ಘಟಕವನ್ನೆ ಗ್ರಾಮಸ್ಥರು ನಂಬಿದ್ದಾರೆ. ಒಂದು ಕ್ಯಾನ್ ನೀರು ಅಂದರೆ 20 ಲೀಟರ್ ನೀರಿಗೆ 5 ರೂಪಾಯಿ ಕೊಡಬೇಕಾದ ಸ್ಥಿತಿ ಬಂದಿದೆ. 2 ರೂ, ಗೆ 20 ಲೀಟರ್ ನೀರು ಪಡೆಯುತ್ತಿದ್ದ ಜನರು ಈಗ ಏಕಾಏಕಿ 5 ರೂ ಕೊಡಬೇಕಾಗಿದೆ. ಇದರಿಂದ ನಾಲ್ಕು ಜನರಿರುವ ಸಣ್ಣ ಕುಟುಂಬಕ್ಕೂ ದಿನಕ್ಕೆ 10 ರಿಂದ 15 ರೂಪಾಯಿ ಬೇಕಾಗಿದೆ. ಅಂದರೆ ತಿಂಗಳಿಗೆ ಒಂದು ಕುಟುಂಬ ನೀರಿಗಾಗಿ ಕೊಡುವ ಹಣದ ಲೆಕ್ಕಾಚಾರ ನೀವೇ ಮಾಡಿ.
ಈಗಾಗಲೇ ಒಂದು ವಾರದಿಂದ ನೀರಿನ ದರವನ್ನು ನಿರ್ವಹಣೆಯ ಉದ್ದೇಶದಿಂದ ಏರಿಕೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತಿ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಸೂಚನಾ ಫಲಕ ಹಾಕಿದೆ. ಇದರಿಂದ ಗ್ರಾಮಸ್ಥರು ನಿತ್ಯ ಒಂದು ಕ್ಯಾನ್ ಗೆ 5 ರೂಪಾಯಿ ಚಿಲ್ಲರೆ ಜೋಡಿಸಲು ಹರಸಾಹಸ ಪಡಬೇಕಾಗಿದೆ. ಒಂದೆಡೆ ದರ ಹೆಚ್ಚಳ ಜೊತೆಗೆ ಚಿಲ್ಲರೆ ಸಮಸ್ಯೆಯಾಗ್ತಿದೆ. ಹೀಗಾಗಿ ಟೋಕನ್ ವ್ಯವಸ್ಥೆಯ ಮೂಲಕವಾದರೂ ನೀರು ಕೊಡಿ ಅಂತಾರೆ ಗ್ರಾಮಸ್ಥರು.
