ಯಲಹಂಕ ಮೇಲ್ಸೇತುವೆ ಸಾವರ್ಕರ್ ಹೆಸರು: ವಿಪಕ್ಷಗಳ ವಿರೋಧ

ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ವಿನಾಯಕ ದಾಮೋದರ ಸಾವರ್ಕರ್ ಹೆಸರಿಡಲು ನಿರ್ಧರಿಸಲಾಗಿದೆ. ಆದರೆ, ಇದು ವಿಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಈ ಕುರಿತು ಫೇಸ್ ಬುಕ್ ಪುಟದಲ್ಲಿ ವಿರೋಧ ದಾಖಲಿಸಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಸ್ವಾತಂತ್ರ್ಯಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯಗಳಲ್ಲಿ ನಾಮಕರಣ ಮಾಡುವುದುಂಟೆ? ಎಂದು ಅವರು ಪ್ರಶ್ನಿೆಸಿದ್ದಾರೆ.
ಜೊತೆಗೆ, ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹಪಡಿಸುತ್ತೇನೆ ಎಂದು ಅವರು ಒತ್ತಾಯಿಸಿದ್ದಾರೆ.
ಇದೇ 28ರಂದು 400 ಮೀಟರ್ ಉದ್ದ, 17 ಮೀಟರ್ ಅಗಲ 4 ಪಥಗಳುಳ್ಳ ಮೇಲ್ಸೇತುವೆಯನ್ನು ಉದ್ಘಾಟನೆಗೆ ವೇದಿಕೆ ಸಿದ್ಧವಾಗಿದ್ದು, ಈ ಮೇಲ್ಸೇತುವೆ “ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಮೇಲ್ಸೇತುವೆ” ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಎಚ್.ಡಿ.ಕೆ. ಪೋಸ್ಟ್ ಗೆ ಸಾಕಷ್ಟು ಪರ ಮತ್ತು ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಲೋಕೇಶ್ ಲೋಕಿ ಎಂಬುವವರು, “ಕನಕ ದಾಸ. ಸಾಲು ಮರದ ತಿಮ್ಮಕ್ಕ. ವಾಲ್ಮೀಕಿ. ಕೆಂಪೇಗೌಡ. ಹೇಮರೆಡ್ಡಿ ಮಲ್ಲಮ್ಮ. ಕುವೆಂಪು. ಬೇಂದ್ರೆ. ಶಿವಕುಮಾರ್ ಸ್ವಾಮೀಜಿ. ಪುಟ್ಟರಾಜಗವಾಯಿ. ಮತ್ತೆ ಸುಧಾಮೂರ್ತಿ. ಎಷ್ಟು ಮಹನೀಯರು ಕರ್ನಾಟಕ ದಲ್ಲಿ ಇದ್ದರೆ. ಅವರಿಗೆ ಅವಮಾನ ಮಾಡಬೇಡಿ” ಎಂದಿದ್ದಾರೆ.
ವಿಜಯ್ ಇಂಚಗೇರಿಯವರು, “ವೀರ ವಿನಾಯಕ ದಾಮೋದರ ಸಾವರ್ಕರ್ ಜಿ ರವರ ಹೆಸರನ್ನು ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಜನತೆ ಬೆಂಬಲ ಸದಾ ಇರುತ್ತದೆ ಜೈ ಹಿಂದ ಜೈ ಕರ್ನಾಟಕ” ಎಂದಿದ್ದಾರೆ.
ವೀರೇಶ ಬಾಗೇವಾಡಿ ಎಂಬುವವರು “ಅಯ್ಯೋ .ಸಾವರ್ಕರ ಹೆಸರ ತಾನೇ ಇಡಲಿ ಬಿಡಿ. ವಿರೋಧ ಮಾಡಿದರೆ ಸಿಟ್ಟಾಗಿ ಶೋಭಕ್ಕ ಹೇಸರಿಟ್ಟಾರು ಮತ್ತೆ …” ಎಂದು ಕುಹಕವಾಡಿದ್ದಾರೆ.
ಆದರೆ, ಇದಕ್ಕೆ ವಿಪಕ್ಷಗಳ ನಾಯಕರು ಸೇರಿದಂತೆ ಕನ್ನಡಪರ ಸಂಘಟನೆಗಳಿಂದ ಕೂಡ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಾಳೆಯೇ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Exit mobile version