ದೆಹಲಿ: ಲಾಕ್ ಡೌನ್ ತೆರವಿನಿಂದಾಗಿ ದೆಹಲಿಯಲ್ಲಿ ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದರು.
ದೆಹಲಿಯಲ್ಲಿ ಕೊರೊನಾ ಕುರಿತು ಮಾತಾಡಿದ ಅವರು, ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಸಾವಿನ ಸಂಖ್ಯೆ ಮತ್ತು ಗಂಭೀರ ಪ್ರಕರಣಗಳು ತೀವ್ರಗತಿಯಲ್ಲಿ ಏರಿಲ್ಲ. ಆದ್ದರಿಂದ ಚಿಂತೆಗೀಡಾಗಬೇಕಾದ ಅಗತ್ಯವಿಲ್ಲ. ಕೊರೊನಾ ಪೀಡಿತರು ಚಿಕಿತ್ಸೆಯಿಂದ ಗುಣವಾದ ನಂತರ ಚಿಂತಿಸಬೇಕಿಲ್ಲ ಎಂದರು.
ದೆಹಲಿಯಲ್ಲಿ ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ನಡುವೆ ಕೂಡ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಹುತೇಕ ಪ್ರಕರಣಗಳು ಗಂಭೀರವಲ್ಲದ ಅಥವಾ ಮನೆಯಲ್ಲೇ ಚಿಕಿತ್ಸೆ ನೀಡಬಹುದಾದ ಪ್ರಕರಣಗಳು ಎಂದರು.
ಕೊರೊನಾ ಸಮಯದಲ್ಲಿ, ಕೊರೊನಾ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳಿಗೆ ಶೋಕಾಸ್ ನೊಟೀಸ್ ನೀಡಿದ್ದೇವೆ. ಇಂತಹ ಸಮಯದಲ್ಲಿ ಚಿಕಿತ್ಸೆ ನೀಡುವುದು ಆಸ್ಪತ್ರೆಗಳ ಜವಾಬ್ದಾರಿ. ರೋಗಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಅವರಿಗೆ ಕೊರೊನಾ ಆಸ್ಪತ್ರೆಗೆ ತಲುಪಿಸುವುದು ಕೂಡ ಆಸ್ಪತ್ರೆಯ ಜವಾಬ್ದಾರಿ ಎಂದರು.
ನಿನ್ನೆಯವರೆಗೆ ದೆಹಲಿಲ್ಲಿ 13,418 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 6,540 ಜನ ಗುಣಮುಖರಾಗಿದ್ದಾರೆ. 6,617 ಸಕ್ರಿಯ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದರು.
ಇಂದಿನಿಂದ 2,000 ಹೊಸ ಬೆಡ್ ಗಳ ವ್ಯವಸ್ಥೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಇಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. 3,314 ಜನರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
