ಗೋಲ್ಡನ್ ಜುಬಲಿ ಸಂಭ್ರಮದಲ್ಲಿ ಈಶ್ವರಿ ಸಂಸ್ಥೆ

ಬೆಂಗಳೂರು: ಈಶ್ವರಿ ಸಂಸ್ಥೆಯನ್ನು ಕನ್ನಡ ಸಿನಿಪ್ರೇಮಿಗಳು ಮರೆಯುವ ಹಾಗಿಲ್ಲ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಂತಹ ಮಹಾನ್ ಕಲಾವಿದರನ್ನು ಕನ್ನಡ ಸಿನಿಮಾಗೆ ಪರಿಚಯಿಸಿದ ಕೀರ್ತಿ ಈಶ್ವರಿ ಸಂಸ್ಥೆಯದ್ದು. ಅಂತಹ ಈಶ್ವರಿ ಸಂಸ್ಥೆ ಇದೀಗ ಗೋಲ್ಡನ್ ಜುಬಲಿ ಸಂಭ್ರಮದಲ್ಲಿದೆ.

ಈಶ್ವರಿ ಸಂಸ್ಥೆಯ ಸಂಸ್ಥಾಪಕರು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ತಂದೆ ಶ್ರೀ.ಎನ್.ವೀರಾಸ್ವಾಮಿ ಅವರು. 1970-71 ರಲ್ಲಿ ಡಾ.ರಾಜ್ ಕುಮಾರ್ ಅವರು ತ್ರಿಪಾತ್ರದಲ್ಲಿ ನಟಿಸಿದ ಕುಲಗೌರವ ಸಿನಿಮಾವನ್ನು ನಿರ್ಮಿಸುವ ಮೂಲಕ ವೀರಾಸ್ವಾಮಿ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ನಡೆದಿದ್ದೆಲ್ಲವು ಇತಿಹಾಸ. ಕನ್ನಡದ ಮಹಾನ್ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ವಿಜಯ್, ದೊರೈ ಭಗವಾನ್, ಭಾರ್ಗವ  ಸೇರಿದಂತೆ ಹಲವಾರು ನಿರ್ದೇಶಕರು ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.

ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಶ್ರೀನಾಥ್, ಅನಂತ್ ನಾಗ್, ಲೀಲಾವತಿ, ಪಾಂಡರಿಬಾಯಿ, ಲಕ್ಷ್ಮಿ, ಶುಭ , ಆರತಿ, ಭಾರತಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ನಟಿಯರ ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಈಶ್ವರಿ ಸಂಸ್ಥೆಗೆ ಸೇರುತ್ತದೆ.

ಈ ಸಂಸ್ಥೆಯ ಮೂಲಕ ನಿರ್ಮಾಣವಾದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಕುಲಗೌರವ, ನಾಗರಹಾವು, ನಾ ನಿನ್ನ ಮರೆಯಲಾರೆ, ಭೂತಯ್ಯನ ಮಗ ಅಯ್ಯು, ನಾರದ ವಿಜಯ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿದರು ಎನ್. ವೀರಾಸ್ವಾಮಿ ಅವರು.

ರವಿಚಂದ್ರನ್ ಅವರು ನಿರ್ದೇಶಿಸಿ ನಟಿಸಿದ ಮೊದಲ ಸಿನಿಮಾ ಪ್ರೇಮಲೋಕ ಈಶ್ವರಿ ಸಂಸ್ಥೆಯ ಮೂಲಕವೇ ನಿರ್ಮಾಣವಾಗಿತ್ತು.  ಪ್ರೇಮಲೋಕ ಸಿನಿಮಾದ ರೇಕರ್ಡ್ಸ್ ಅನ್ನು ಇಂದಿಗೂ ಯಾವ ಸಿನಿಮಾ ಕೂಡ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ರವಿಚಂದ್ರನ್ ಅವರ ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ ಇನ್ನು ಕೆಲವು ಸಿನಿಮಾಗಳು ಅವರ ತಂದೆ ಇರುವಾಗಲೇ ನಿರ್ಮಾಣವಾಯಿತು.

ವೀರಾಸ್ವಾಮಿ ಅವರು ನಿಧನರಾದ ನಂತರ ರವಿಚಂದ್ರನ್ ಅವರು  ಈಶ್ವರಿ ಸಂಸ್ಥೆಯನ್ನು ನೋಡಿಕೊಳ್ಳತೊಡಗಿದರು. ಈಶ್ವರಿ ಸಂಸ್ಥೆಯ ಮೂಲಕ ಸಿಪಾಯಿ, ಏಕಾಂಗಿ, ಮಲ್ಲ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿ, ಯಶಸ್ಸು ಗಳಿಸಿದರು ಕ್ರೇಜಿ ಸ್ಟಾರ್. 

Exit mobile version